ಬೆಂಗಳೂರು: ಮದುವೆ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ, ಜನಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದೆ. ಇದುವರೆಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ಅವಕಾಶವಿದ್ದ ವಿವಾಹ ನೋಂದಣಿ ಪ್ರಕ್ರಿಯೆಯನ್ನು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿಸಲು, ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿಯೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದಕ್ಕಾಗಿ ಕಾನೂನು ತಿದ್ದುಪಡಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಲೆಯುವ ಅಗತ್ಯ ಇರುವುದಿಲ್ಲ. ಆನ್ಲೈನ್ ನಲ್ಲೇ ವಿವಾಹ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಹಿಂದೂ ವಿವಾಹಗಳ ನೋಂದಣಿ(ಕರ್ನಾಟಕ) ತಿದ್ದುಪಡಿ ನಿಯಮಗಳು -2024ಕ್ಕೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ವಧು-ವರ ಹಾಗೂ ಸಾಕ್ಷಿದಾರರ ಆಧಾರ್ ಕಾರ್ಡ್ ಸೇರಿ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ನಲ್ಲೆ ಅರ್ಜಿ ಸಲ್ಲಿಸಿ ನೋಂದಣಿ ಪ್ರಮಾಣ ಪತ್ರ ಪಡೆಯಬಹುದು. ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿವಾಹ ನೋಂದಣಿ ಪ್ರಕ್ರಿಯೆ ಸರಳಗೊಳಿಸಿ ಜನಸ್ನೇಹಿಯಾಗಿಸಲು ಕ್ರಮ ಕೈಗೊಳ್ಳುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿತ್ತು. ಅಂತೆಯೇ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದು ವಿವಾಹ ನೋಂದಣಿಗಷ್ಟೇ ಸೀಮಿತವಾಗಿದೆ. ವಿಶೇಷ ಮದುವೆ ಕಾಯ್ದೆಯಡಿ ರಿಜಿಸ್ಟರ್ ಮ್ಯಾರೇಜ್ ಆಗಲು ಅನ್ವಯವಾಗುವುದಿಲ್ಲ. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ವಧು-ವರರು ನಿಗದಿಪಡಿಸಿದ ನೋಟಿಸ್ ಅನ್ನು ದ್ವಿಪ್ರತಿಯಲ್ಲಿ ಭರ್ತಿ ಮಾಡಿ ನೋಂದಣಿ ಅಧಿಕಾರಿಗೆ ಸಲ್ಲಿಸಿ ನೋಟಿಸ್ ನೀಡಿದ 30 ದಿನಗಳೊಳಗೆ ಆಕ್ಷೇಪಣೆ ಬಾರದಿದ್ದಾಗ ಮುಂದಿನ 30 ದಿನಗಳೊಳಗೆ ಮೂವರು ಸಾಕ್ಷಿಗಳೊಂದಿಗೆ ಮದುವೆ ಅಧಿಕಾರಿಯ ಮುಂದೆ ಹಾಜರಾಗಿ ಸಹಿ ಹಾಕಬೇಕು ಎಂದು ಹೇಳಲಾಗಿದೆ.
ಹಿಂದೂ ವಿವಾಹ ನೋಂದಣಿ ಅಧಿನಿಯಮ ಹಿಂದೂಗಳು, ಬೌದ್ಧರು, ಸಿಖ್, ಅಥವಾ ಆರ್ಯ ಸಮಾಜದ ಅನುಯಾಯಿಗಳಿಗೆ ಅನ್ವಯವಾಗುತ್ತದೆ. ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಯಹೂದಿಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ.