
ನವದೆಹಲಿ: ಆಯುಷ್ಮಾನ್ ವಿಮೆ ಸೇರ್ಪಡೆ ಮಿತಿ 60 ವರ್ಷಕ್ಕೆ ಇಳಿಕೆ, ಚಿಕಿತ್ಸಾ ವೆಚ್ಚ 10 ಲಕ್ಷ ರೂ.ಗೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ.
70 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸುವ ಆಯುಷ್ಮಾನ್ ವಯಾ ವಂದನಾ ಕಾರ್ಡ್ ಸೇರ್ಪಡೆ ವಯೋಮಿತಿಯನ್ನು 60 ವರ್ಷಕ್ಕೆ ಇಳಿಕೆ ಮಾಡಬೇಕು ಎಂದು ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ರಾಜ್ಯಸಭೆಯಲ್ಲಿ ಈ ಬಗ್ಗೆ ವರದಿ ಮಂಡಿಸಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಪ್ರಸ್ತುತ ಇರುವ ಚಿಕಿತ್ಸೆ ವೆಚ್ಚ 5 ಲಕ್ಷ ರೂ.ಗಳಿಂದ 10 ಲಕ್ಷ ರೂಪಾಯಿಗೆ ಪರಿಷ್ಕರಿಸಬೇಕೆಂದು ಶಿಫಾರಸು ಮಾಡಲಾಗಿದೆ.
ಇದರೊಂದಿಗೆ ಜನರ ಹಿತ ದೃಷ್ಟಿಯಿಂದ ಯೋಜನೆಯ ವ್ಯಾಪ್ತಿ ವಿಸ್ತರಿಸಲು ಆಯುಷ್ಮಾನ್ ಕಾರ್ಡ್ ಗಳಿಗೆ 70 ವರ್ಷದಿಂದ 60 ವರ್ಷಕ್ಕೆ ಇಳಿಕೆ ಮಾಡಬೇಕೆಂದು ಹೇಳಲಾಗಿದೆ. ಸರ್ಕಾರ ಆಯುಷ್ಮಾನ್ ಯೋಜನೆ ಅಡಿ 4.5 ಕೋಟಿ ಕುಟುಂಬಗಳ 70 ವರ್ಷ ಮತ್ತು ಮೇಲ್ಪಟ್ಟ 6 ಕೋಟಿ ನಾಗರಿಕರಿಗೆ ಉಚಿತ ಆರೋಗ್ಯ ಸೇವೆ ನೀಡುವ ಯೋಜನೆ ಘೋಷಿಸಿತ್ತು.