ಉಪ್ಪಿನಕಾಯಿ ಕೆಡದಂತೆ ಇಡಲು, ಜೊತೆಗೆ ರುಚಿ ಹೆಚ್ಚಿಸಲು ಹಸಿ ಸಾಸಿವೆ ಎಣ್ಣೆಯನ್ನು ಬಳಸಲಾಗುತ್ತದೆ. ಎಣ್ಣೆಯನ್ನು ಜಾಸ್ತಿ ಪ್ರಮಾಣದಲ್ಲಿ ಸೇರಿಸುವುದರಿಂದ ಉಪ್ಪಿನಕಾಯಿ ಖಾಲಿಯಾದ ಮೇಲೆ ಕೊನೆಯಲ್ಲಿ ಬಹಳಷ್ಟು ಎಣ್ಣೆ ಉಳಿದುಕೊಳ್ಳುತ್ತದೆ.
ಈ ಎಣ್ಣೆಯನ್ನು ಬಿಸಾಡಬೇಡಿ, ಇದನ್ನು ಮರುಬಳಕೆ ಮಾಡಬಹುದು. ಹೆಚ್ಚಿನ ಜನರು ಹೊಸ ಉಪ್ಪಿನಕಾಯಿ ಮಾಡಿ ಎಣ್ಣೆಯನ್ನು ಮತ್ತೆ ಅದರಲ್ಲಿ ಹಾಕುತ್ತಾರೆ. ಉಪ್ಪಿನಕಾಯಿ ಎಣ್ಣೆಯನ್ನು ಮರುಬಳಕೆ ಮಾಡಲು ಬೇರೆ ಮಾರ್ಗಗಳೂ ಇವೆ.
ಉಪ್ಪಿನಕಾಯಲ್ಲಿ ಉಳಿದ ಎಣ್ಣೆಯನ್ನು ಮಾಂಸ, ಮೀನು ಅಥವಾ ತರಕಾರಿಗಳನ್ನು ಮ್ಯಾರಿನೇಟ್ ಮಾಡಲು ಬಳಸಬಹುದು. ಇದಕ್ಕೆ ಸ್ವಲ್ಪ ಬೆಳ್ಳುಳ್ಳಿ, ಶುಂಠಿ ಮತ್ತು ಮೊಸರು ಸೇರಿಸಿ. ಹೀಗೆ ಮಾಡುವುದರಿಂದ ಭಕ್ಷ್ಯಗಳು ತುಂಬಾ ರುಚಿಯಾಗಿರುತ್ತವೆ.
ಸಲಾಡ್ ಡ್ರೆಸ್ಸಿಂಗ್‌ಗಾಗಿ ಉಪ್ಪಿನಕಾಯಿಯಲ್ಲಿ ಉಳಿದ ಎಣ್ಣೆಯನ್ನು ಬಳಸಬಹುದು. ಇದು ಸಲಾಡ್‌ಗೆ ಮಸಾಲೆಯುಕ್ತ ಪರಿಮಳವನ್ನು ತರುತ್ತದೆ. ವಿಶೇಷವಾಗಿ ಸೊಪ್ಪಿನ ಸಲಾಡ್ ತಯಾರಿಸಿದರೆ ಈ ಡ್ರೆಸ್ಸಿಂಗ್ ಅದರ ರುಚಿ ಹೆಚ್ಚಿಸುತ್ತದೆ.
ಉಪ್ಪಿನಕಾಯಿಯಲ್ಲಿ ಉಳಿದ ಎಣ್ಣೆಯನ್ನು ಚಪಾತಿ ಹಿಟ್ಟು ಕಲಸಲು ಬಳಸಬಹುದು. ಈ ಎಣ್ಣೆಯನ್ನು ಹಾಕಿ ಕಲಸುವುದರಿಂದ ಚಪಾತಿ ಮೃದುವಾಗಿರುತ್ತದೆ. ಉಪ್ಪಿನಕಾಯಿಯಲ್ಲಿ ಉಳಿದ ಎಣ್ಣೆ ಚಟ್ನಿಯ ರುಚಿಯನ್ನು ಹೆಚ್ಚಿಸುತ್ತದೆ. ಚಟ್ನಿಯ ಜೊತೆ ಈ ಎಣ್ಣೆಯನ್ನು ಸ್ವಲ್ಪ ಹಾಕಿಕೊಂಡು ಅನ್ನಕ್ಕೆ ಕಲಸಿ ತಿನ್ನಿರಿ.