ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಮಾನದಂಡಗಳ ಅನ್ವಯ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಅನುಕೂಲವಾಗುವಂತೆ ಪ್ರೌಢಶಾಲೆ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿದ್ಯಾರ್ಹತೆಯನ್ನು ಪದವಿಯಿಂದ ಸ್ನಾತಕೋತ್ತರ ಪದವಿಗೆ ಪರಿಷ್ಕರಿಸಲು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಸಮಗ್ರ ಅಧ್ಯಯನ ನಡೆಸಿ ಕರಡು ರಚನೆಗೆ ನಾಲ್ಕು ವಿಭಾಗವಾರು ತಂಡಗಳನ್ನು ನೇಮಕ ಮಾಡಲಾಗಿದೆ.
ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶಿಸಲಾಗಿದೆ. ಪ್ರಸ್ತುತ ಪ್ರೌಢಶಾಲೆ ಶಿಕ್ಷಕರಾಗಲು ಬಿಎಡ್ ಜೊತೆಗೆ ಯಾವುದಾದರೂ ಪದವಿ ಕಡ್ಡಾಯವಾಗಿದೆ. ಇನ್ನು ಮುಂದೆ, ಸ್ನಾತಕೋತ್ತರ ಪದವಿ ಕಡ್ಡಾಯವಾಗಲಿದೆ.
ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ನಲ್ಲಿ ಕಡ್ಡಾಯವಾಗಿ ತಲಾ ಶೇಕಡ 50 ರಷ್ಟು ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಸಿಇಟಿಯಲ್ಲಿ ಪಡೆದ ಶೇಕಡ 60 ರಷ್ಟು ಅಂಕ, ಪದವಿಯ ಶೇಕಡ 20 ರಷ್ಟು, ಹಾಗೂ ತಲಾ ಶೇಕಡ 10 ರಷ್ಟು ಸ್ನಾತಕೋತ್ತರ ಪದವಿ ಮತ್ತು ಬಿಎಡ್ ನಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.