ಶಿವಮೊಗ್ಗ: ರಾಜ್ಯದಲ್ಲಿ ಸರ್ವೇಯರ್ ಗಳ ಕೊರತೆ ಹೆಚ್ಚಿದೆ. ಆದ್ದರಿಂದ ಸರ್ವೇ ಇಲಾಖೆ ವತಿಯಿಂದ 2000 ಲೈಸೆನ್ಸ್ಡ್ ಸರ್ವೇಯರ್ ಮತ್ತು 354 ಸರ್ಕಾರಿ ಸರ್ವೇಯರ್ ನೇಮಕಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಅಗತ್ಯವಾದ ಸರ್ವೇಯರ್ ಗಳನ್ನು ಅಕ್ಕಪಕ್ಕದ ಜಿಲ್ಲೆಯಿಂದ ಒದಗಿಸಲು ಹಾಗೂ ಹೊಸದಾಗಿ ನೇಮಕಗೊಂಡ ಸರ್ವೇಯರ್ ನಿಯೋಜಿಸುವಂತೆ ಇಲಾಖೆ ಆಯುಕ್ತರಿಗೆ ತಿಳಿಸಿದ್ದೇನೆ. ಹಾಗೂ 1500 ರಿಂದ 1700 ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆ ತರಲು ಹಾಗೂ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇ-ಆಫೀಸ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ತಹಶೀಲ್ದಾರ್ ಕಚೇರಿಯಿಂದ ಮೇಲಿನ ಹಂತದ ಕಚೇರಿವರೆಗೆ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನೋಂದಣಿ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಇಲಾಖೆಯಲ್ಲಿ ಸುಮಾರು ಐದು ವರ್ಷಗಳಿಂದ ಮಾರುಕಟ್ಟೆ ಬೆಲೆ ಪರಿಷ್ಕರಣೆಯಾಗಿರಲಿಲ್ಲ. ಗೈಡೆನ್ಸ್ ದರ ಮತ್ತು ಮಾರುಕಟ್ಟೆ ದರಕ್ಕೆ ಸುಮಾರು ನಾಲ್ಕು ಪಟ್ಟು ವ್ಯತ್ಯಾಸವಿದೆ. ಗೈಡೆನ್ಸ್ ದರಕ್ಕಿಂತ ಮಾರುಕಟ್ಟೆ ದರ 3 ರಿಂದ 4 ನಾಲ್ಕು ಹೆಚ್ಚಿದೆ. ಈ ತಾರತಮ್ಯ ಸರಿಪರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಾರುಕಟ್ಟೆ ದರವನ್ನು ಪರಿಷ್ಕರಿಸಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಆಕ್ಷೇಪಣೆಗಳನ್ನು ಜನರು ಸಲ್ಲಿಸಬಹುದು. ನೋಂದಣಿ ಕಚೇರಿಯಲ್ಲಿ ಸರ್ವರ್ ಅಲ್ಲ ಬದಲಾಗಿ ನೆಟ್‍ವರ್ಕ್ ಸಮಸ್ಯೆ ಇದೆ ಎಂದ ಸಚಿವರು ಈ ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿಗೆ ಸೂಕ್ತ ಸೂಚನೆ ಮತ್ತು ಸಲಹೆಯನ್ನು ನೀಡಿದರು.