ಬೆಂಗಳೂರು: ರೈಲುಗಳ ವಿಳಂಬದಿಂದ ಲೋಕೋಪಯೋಗಿ ಇಲಾಖೆ ಪರೀಕ್ಷೆಗೆ ಗೈರುಹಾಜರಾದ ಪರೀಕ್ಷಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಕೆ.ಪಿ.ಎಸ್.ಸಿ. ಅವಕಾಶ ಕಲ್ಪಿಸಿದೆ. ಡಿಸೆಂಬರ್ 29 ರಂದು ಮರು ಪರೀಕ್ಷೆ ನಿಗದಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಡಿಸೆಂಬರ್ 29 ರಂದು ಪರೀಕ್ಷೆ ನಡೆಯಲಿದ್ದು, ಡಿಸೆಂಬರ್ 22 ರೊಳಗೆ ರೈಲು ಟಿಕೆಟ್ ಸಮೇತ ದಾಖಲೆ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.
ಡಿಸೆಂಬರ್ 14 ರಂದು ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಂದ್ರದಲ್ಲಿ ಹಾಜರಾಗಲು ಹಾಸನ -ಸೊಲ್ಲಾಪುರ ಎಕ್ಸ್ ಪ್ರೆಸ್ ಮತ್ತು ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕೆಲವು ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದರು. ರೈಲು ನಿಗದಿತ ವೇಳೆಗೆ ಕಲಬುರ್ಗಿ ಕೇಂದ್ರವನ್ನು ತಲುಪಲು ಸಾಧ್ಯವಾಗಲಿಲ್ಲ. ಇದರಿಂದ ಪರೀಕ್ಷೆ ಅವಕಾಶದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಮರು ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ಡಿಸೆಂಬರ್ 22 ರೊಳಗೆ ಕೆ.ಪಿ.ಎಸ್.ಸಿ. ಕಾರ್ಯದರ್ಶಿಗೆ ಮನವಿ ಪತ್ರ, ಹಾಸನ -ಸೊಲ್ಲಾಪುರ ಎಕ್ಸ್ ಪ್ರೆಸ್, ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಸಂಬಂಧಿಸಿದ ಟಿಕೆಟ್ ಪ್ರತಿ, ಆಯೋಗ ನೀಡಿದ ಪ್ರವೇಶ ಪತ್ರದ ಪ್ರತಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಅಥವಾ ಖುದ್ದಾಗಿ ಕೇಂದ್ರ ಕಚೇರಿ ಅಥವಾ ಈಮೇಲ್ kpsc-ka@nic.in ಮೂಲಕ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.