ಬೆಂಗಳೂರು: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪರಿಷ್ಕೃತ ಮೀಸಲಾತಿ ಅನುಷ್ಠಾನಗೊಳ್ಳುವವರೆಗೆ ನೇರ ನೇಮಕಾತಿ ತಡೆಹಿಡಿಯಬೇಕು. ಮೀಸಲಾತಿ ಅನ್ವಯ ಮುಂಬಡ್ತಿ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಲಾಖೆ ಮುಂಬಡ್ತಿ ಸಮಿತಿ ಸಭೆ ನಡೆಸಬಾರದು ಎಂದು ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು, ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ, ಪರಿಶಿಷ್ಟರಿಗೆ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲು ಹೆಚ್ಚಿಸುವ ಸುಗ್ರೀವಾಜ್ಞೆ ನವೆಂಬರ್ 1 ರಿಂದ ಜಾರಿಗೆ ಬಂದಿದೆ. ನೇರ ನೇಮಕಾತಿ ಪದೋನ್ನತಿಯಲ್ಲಿ ಪರಿಶಿಷ್ಟರಿಗೆ ಮೀಸಲಾತಿಗೆ ರೋಸ್ಟರ್ ಅಂತಿಮಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪ್ರಕ್ರಿಯೆ ಅಂತಿಮವಾಗಿ ಅಧಿಕೃತವಾಗಿ ಪ್ರಕಟವಾಗುವವರೆಗೆ ನೇರ ನೇಮಕಾತಿ ಪ್ರಕ್ರಿಯೆ ಮತ್ತು ಮುಂಬಡ್ತಿ ತಡೆ ಹಿಡಿಯಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣ ಶೇಕಡ 15 ರಿಂದ ಶೇಕಡ 17ರಷ್ಟು, ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಶೇಕಡ 3 ರಿಂದ ಶೇಕಡ 7ರಷ್ಟು ಏರಿಕೆಯಾಗಿದೆ. ಒಟ್ಟಾರೆ ಪರಿಶಿಷ್ಟ ಮೀಸಲಾತಿ ಪ್ರಮಾಣ ಶೇಕಡ 18 ರಿಂದ 24ಕ್ಕೆ ಹೆಚ್ಚಳ ಮಾಡಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
ನೇಮಕಾತಿ ಮತ್ತು ಮುಂಬಡ್ತಿಗೆ ಬ್ರೇಕ್ ಬಿದ್ದಿರುವುದರಿಂದ ನೌಕರಿ ನಿರೀಕ್ಷೆಯಲ್ಲಿದ್ದವರು ಮತ್ತು ಮುಂಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ನಷ್ಟವಾಗಲಿದೆ. ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸಾಕಷ್ಟು ನೌಕರರು ಸೇವೆಯಿಂದ ನಿವೃತ್ತರಾಗಲಿದ್ದು, ಮುಂಬಡ್ತಿ ಪ್ರಕ್ರಿಯೆ ಸ್ಥಗಿತಗೊಳಿಸುವುದರಿಂದ ಬಡ್ತಿ ಹೊಂದುವುದರಿಂದ ವಂಚಿತರಾಗುತ್ತಾರೆ. ಮುಂಬಡ್ತಿಯಾದ ನೌಕರರಿಗೆ ಪಿಂಚಣಿ ಸೇರಿದಂತೆ ಕೆಲವು ಸೌಲಭ್ಯಗಳು ಸಿಗುತ್ತವೆ. ಇನ್ನೂ ಈಗಾಗಲೇ ಅಧಿಸೂಚನೆ ಹೊರಡಿಸಿದ್ದ ಹುದ್ದೆಗಳ ನೇಮಕಾತಿ ಮುಂದುವರೆಯಲಿದೆ. ಹೊಸದಾಗಿ ನೇಮಕ ಪ್ರಕ್ರಿಯೆ ಆರಂಭಿಸಲು ಉದ್ದೇಶಿಸಿದ್ದ ಇಲಾಖೆಗಳಲ್ಲಿ ನೇಮಕಾತಿ ಸ್ಥಗಿತಗೊಳಿಸಲಾಗುವುದು. ಆಹಾರ, ಲೋಕೋಪಯೋಗಿ ಇಲಾಖೆ. ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ನೇಮಕಾತಿಗೆ ಬ್ರೇಕ್ ಬಿದ್ದಿದೆ. 103 ಬ್ರೇಕ್ ಇನ್ಸ್ಪೆಕ್ಟರ್ ಗಳ ಮುಂಬಡ್ತಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಪ್ರಾಥಮಿಕ ಶಾಲೆ ಶಿಕ್ಷಕರನ್ನು ಆರರಿಂದ ಎಂಟನೇ ತರಗತಿ ಪದವೀಧರ ಶಿಕ್ಷಕರಾಗಿ ಬಡ್ತಿ ನೀಡುವ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ. ಬ್ಯಾಕ್ ಲಾಗ್ ಹುದ್ದೆ ನೌಕರರ ಮುಂಬಡ್ತಿಗೂ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ.