ಬೆಂಗಳೂರು : ಅನುಕಂಪ ಆಧಾರದ ನೇಮಕಾತಿ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ಆತನ ಅವಲಂಬಿತರಲ್ಲಿ ಒಬ್ಬರಿಗೆ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರನ್ವಯ ಅರ್ಹತೆಯ ಆಧಾರದ ಮೇಲೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸದರಿ ಅನುಕಂಪದ ಆಧಾರದ ನೌಕರಿಯನ್ನು ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತನಾದಲ್ಲಿ ಆತನ ಕುಟುಂಬಕ್ಕೆ ಉಂಟಾಗುವ ಆರ್ಥಿಕ ಕ್ರೋಭೆಯನ್ನು ತಡೆಯಲು ನೀಡುವಂತಹ ವ್ಯವಸ್ಥೆಯಾಗಿದ್ದರೂ ಇದನ್ನು ಹಕ್ಕೊತ್ತಾಯ ಮಾಡಲು ಅವಕಾಶವಿರುವುದಿಲ್ಲ. ಈ ನಿಯಮಗಳಲ್ಲಿ ಅನುಕಂಪದ ನೇಮಕಾತಿಗಾಗಿ ನಿಗಧಿಪಡಿಸಿರುವ ಎಲ್ಲಾ ಷರತ್ತು ಮತ್ತು ನಿಬಂಧನೆಗಳನ್ನು ಅರ್ಜಿದಾರರು ಪೂರೈಸಿದಲ್ಲಿ ಮಾತ್ರ ಅನುಕಂಪದ ನೇಮಕಾತಿಗಾಗಿ ಪರಿಗಣಿಸಬಹುದಾಗಿದೆ.
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರ ನಿಯಮ 4(4) ರನ್ವಯ ಅಭ್ಯರ್ಥಿಯ ವಿದ್ಯಾರ್ಹತೆಗನುಗುಣವಾಗಿ ಕರ್ನಾಟಕ ಸರ್ಕಾರ ಸಚಿವಾಲಯದ ಸಹಾಯಕ ಹುದ್ದೆಯ ವೇತನ ಶ್ರೇಣಿಯನ್ನು ಮೀರದಂತಹ ಗರಿಷ್ಠ ಗ್ರೂಪ್ “ಸಿ” ಹುದ್ದೆ ಅಥವಾ ಗ್ರೂಪ್ “ಡಿ” ಹುದ್ದೆಯನ್ನು ನೀಡಬಹುದಾಗಿದೆ. ಅನುಕಂಪದ ಆಧಾರದ ಮೇಲಿನ ನೇಮಕಾತಿ ಅರ್ಜಿಯನ್ನು ಸಲ್ಲಿಸಿದಾಗ ಯಾವ ನಿಯಮ ಚಾಲ್ತಿಯಲ್ಲಿರುತ್ತದೆಯೋ ಆ ಪ್ರಕಾರವಾಗಿ ನಿರ್ಧರಿಸಬೇಕಿರುತ್ತದೆ ಹಾಗೂ ಅನುಕಂಪದ ಆಧಾರದ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಾಲಮಿತಿಯೊಳಗೆ ಅಭ್ಯರ್ಥಿಯು ವಿದ್ಯಾರ್ಹತೆಯನ್ನು ಪರಿಗಣಿಸಿ ನೇಮಕಾತಿ ನೀಡಬೇಕಾಗುತ್ತದೆ.
ಕೆಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಅವರುಗಳ ವಿದ್ಯಾರ್ಹತೆಯನ್ನು ಪರಿಗಣಿಸದೇ ಕೆಳಹಂತದ ಹುದ್ದೆಗಳಿಗೆ ನೇಮಕಾತಿ ಮಾಡಿರುವ ಬಗ್ಗೆ ದೂರುಗಳು ಸ್ವೀಕೃತವಾಗಿರುತ್ತವೆ. ಈ ನಡೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿರುತ್ತದೆ.
ಅನುಕಂಪದ ಆಧಾರದ ಮೇಲಿನ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿದಾಗ ಯಾವ ನಿಯಮ ಚಾಲ್ತಿಯಲ್ಲಿರುತ್ತದೆಯೋ ಆ ಪ್ರಕಾರವಾಗಿ ಹಾಗೂ ಅನುಕಂಪದ ಆಧಾರದ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಾಲಮಿತಿಯೊಳಗೆ ಅಭ್ಯರ್ಥಿಯು ಹೊಂದಿರುವ ವಿದ್ಯಾರ್ಹತೆಯನ್ನು ಪರಿಗಣಿಸಿ ನೇಮಕಾತಿ ನೀಡಬೇಕಾಗುತ್ತದೆ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಇತರೆ ಜಾತಿ/ಧರ್ಮ/ವರ್ಗದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡದಂತೆ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸುವಂತೆ ಹಾಗೂ ಈ ರೀತಿ ನಿಯಮಾನುಸಾರ ಕ್ರಮವಹಿಸದ ಅಧಿಕಾರಿ / ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಎಲ್ಲಾ ಸಕ್ಷಮ / ನೇಮಕಾತಿ ಪ್ರಾಧಿಕಾರಗಳಿಗೆ ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ.