ಬೆಂಗಳೂರು : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ.
ಅರ್ಹ ಅಭ್ಯರ್ಥಿಗಳು ಇಂದಿನಿಂದ ಇಲಾಖೆಯ ಅಧಿಕೃತ ವೆಬ್ ಸೈಟ್ dce.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆ.2 ಕೊನೆಯ ದಿನ. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಸೆಪ್ಟೆಂಬರ್ 4 ರಂದು ರಾಜ್ಯವ್ಯಾಪಿ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು. ಸೆ. 16 ರಿಂದ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಪಟ್ಟಿ ಪ್ರಕಟಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಈ ಬಗ್ಗೆ ಕಾಲೇಜು ಮತ್ತು ಶಿಕ್ಷಣ ತಾಂತ್ರಿಕ ಇಲಾಖೆಯ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸಂಸ್ಕೃತ ಮತ್ತು ಚಿತ್ರಕಲಾ ಕಾಲೇಜುಗಳೂ ಸೇರಿದಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗಿರುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಬೋಧಕರು ಒಳಗೊಂಡಂತೆ) ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳುವ ಸಂಬಂಧ ಈ ಕೆಳಕಂಡಂತೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಅಧಿಸೂಚನೆ ಹೊರಡಿಸಿದ್ದಾರೆ.
* ಪ್ರಮುಖ ದಿನಾಂಕಗಳು
1) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಆಗಸ್ಟ್ 25
2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2:09:2023
3) ರಾಜ್ಯವ್ಯಾಪಿ ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ 04.09.2023
ರಾಜ್ಯವ್ಯಾಪಿ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಲ್ಲಿ ವಿಷಯವಾರು ಲಭ್ಯವಿರುವ ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಅರ್ಹ ಅಭ್ಯರ್ಥಿಗಳ ರಾಜ್ಯವ್ಯಾಪಿ ಆಯ್ಕೆಪಟ್ಟಿ (State-wise Selection List) ಅನ್ನು ಪ್ರಕಟಿಸಲಾಗುವುದು ಹಾಗೂ ರಾಜ್ಯವ್ಯಾಪಿ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೆ ಈ ಕೆಳಗಿನಂತೆ ನಿಗಧಿಪಡಿಸಿರುವ ಗೌರವಧನವನ್ನು ನಿಯಮಾನುಸಾರ ನಿರ್ವಹಿಸುವ ಕಾರ್ಯಭಾರಕ್ಕೆ ಹಾಗೂ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿರುವ ಅರ್ಹತೆಗೆ (ವಿದ್ಯಾರ್ಹತೆ/ಸೇವಾ ಅವಧಿ) ಅನುಗುಣವಾಗಿ ಪರಿಗಣಿಸಲಾಗುವುದು.
ಅ) 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ. ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ರೂ.32,000/- (ಮೂವತ್ತೆರಡು ಸಾವಿರ ಮಾತ್ರ)
ಆ) 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ. ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ರೂ.30,000/- (ಮೂವತ್ತು ಸಾವಿರ ಮಾತ್ರ)
೪) 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ. ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ರೂ.28,000/- (ಇಪ್ಪತ್ತೆಂಟು ಸಾವಿರ ಮಾತ್ರ) ಎಂದು ಸುತ್ತೋಲೆಯಲ್ಲಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲ ತಾಣ dce.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ.