ಬೆಂಗಳೂರು: ರಾಜ್ಯ ಸರ್ಕಾರ 2021 – 22 ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಜನವರಿ 17 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜನವರಿ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಇಷ್ಟದ ಆಯ್ದ 10 ಸರ್ಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆಯ್ಕೆಯಾದವರಿಗೆ ಅದೇ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಲು ಆದಷ್ಟು ಮಟ್ಟಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಆಯ್ಕೆಯ ಕಾಲೇಜುಗಳಲ್ಲಿ ವಾರಕ್ಕೆ 15 ಗಂಟೆ ಕಾರ್ಯಬಾರ ಇಲ್ಲದಿದ್ದಲ್ಲಿ ಮಾತ್ರ ಬೇರೆ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.
ಅತಿಥಿ ಉಪನ್ಯಾಸಕರಾಗಿ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು. ಸೇವಾ ವಿವರ ಮತ್ತು ವಿದ್ಯಾರ್ಹತೆ ಆಧಾರದ ಮೇಲೆ ನಾನಾ ಮಾನದಂಡಗಳ ಅನ್ವಯ ರಾಜ್ಯ ವ್ಯಾಪ್ತಿಯ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುವುದು. https://Dec.karnataka.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅತಿಥಿ ಉಪನ್ಯಾಸಕರ ನೇಮಕಾತಿಗೆ 100 ಅಂಕ ನಿಗದಿಪಡಿಸಲಾಗಿದ್ದು, ಸ್ನಾತಕೋತ್ತರ ಪದವಿಯಲ್ಲಿ ಎರಡು ವರ್ಷ ಗಳಿಸಿದ ಶೇಕಡವಾರು ಅಂಕಗಳಲ್ಲಿ ಶೇಕಡ 15 ರಷ್ಟು ಪರಿಗಣಿಸಲಾಗುತ್ತದೆ. ಇದಕ್ಕೆ ಗರಿಷ್ಠ 25 ಅಂಕಗಳನ್ನು ಕೊಡಲಾಗುವುದು. ಪಿಹೆಚ್ಡಿ, ಎನ್ಇಟಿ, ಕೆ –ಸೆಟ್, ಸ್ಲೆಟ್, ಎಂಫಿಲ್ ಪದವಿಗಳನ್ನು ಹೆಚ್ಚುವರಿ ವಿದ್ಯಾರ್ಹತೆ ಎಂದು ಪರಿಗಣಿಸಲಾಗುತ್ತದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾತ್ರ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಒಂದು ವರ್ಷಕ್ಕೆ 3 ಅಂಕಗಳನ್ನು ಗರಿಷ್ಠ 16 ವರ್ಷಗಳಿಗೆ ಅನ್ವಯವಾಗುವಂತೆ ನೀಡಲಾಗುವುದು ಎನ್ನಲಾಗಿದೆ.