ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ನಿಗಮಗಳಲ್ಲಿ ಖಾಲಿ ಇರುವ 700ಕ್ಕೂ ಅಧಿಕ ಹುದ್ದೆಗಳಿಗೆ ನೇರ ನೇಮಕಾತಿಗೆ ನಿಗದಿಪಡಿಸಿದ್ದ ಪರೀಕ್ಷಾ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಳಿಕೆ ಮಾಡಿದೆ.
ನಿಗಮಗಳ ಪ್ರತಿ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವಾಗಿ 1000 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1ರ ಅಭ್ಯರ್ಥಿಗಳು 750 ರೂ., ವಿಕಲಚೇತನರು ಮತ್ತು ಮಾಜಿ ಸೈನಿಕರು 250 ರೂ.ಶುಲ್ಕ ಪಾವತಿಸಬೇಕು ಎಂದು ಹೇಳಲಾಗಿತ್ತು.
ಈ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ, ಹಿಂದುಳಿದ ವರ್ಗದ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ರ ಅಭ್ಯರ್ಥಿಗಳಿಗೆ 200 ರೂಪಾಯಿ, ವಿಕಲಚೇತನರು ಮತ್ತು ಮಾಜಿ ಸೈನಿಕರಿಗೆ 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ, ರಾಜ್ಯ ಸರ್ಕಾರದ ಅಡಿಯಲ್ಲಿರುವ ಆಹಾರ ನಿಗಮ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ, ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಎಂಎಸ್ಐಎಲ್ ಸಂಸ್ಥೆಗಳಲ್ಲಿ ಖಾಲಿ ಇರುವ 700ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಸಲ್ಲಿಕೆಗೆ ಈ ಪರಿಷ್ಕೃತ ಶುಲ್ಕ ಅನ್ವಯವಾಗುತ್ತದೆ. ಜೂನ್ 30 ಮಧ್ಯಾಹ್ನ 1 ಗಂಟೆಯಿಂದ ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬಹುದಾಗಿದೆ ಎಂದು ಪ್ರಾಧಿಕಾರದ ನಿರ್ದೇಶಕರಾದ ಎಸ್. ರಮ್ಯಾ ತಿಳಿಸಿದ್ದಾರೆ.