ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆಗಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ವಿವಿಧ ತಾಲ್ಲೂಕು ಆಸ್ಪತ್ರೆಗಳಿಗೆ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 63 ಹುದ್ದೆಗಳನ್ನು 6 ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಮೇ. 10 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗ ನಿರ್ವಹಣೆಗೆ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ರಚಿಸಲಾದ ಐಸಿಯುಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಕಾರ್ಯಗತಗೊಳಿಸಿ ನಿರ್ವಹಿಸಲು ಚಿಗಟೇರಿ ಜಿಲ್ಲಾಸ್ಪತ್ರೆ, ಹರಿಹರ, ಜಗಳೂರು, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕು ಆಸ್ಪತ್ರೆಗಳಿಗೆ 6 ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿರುತ್ತಾರೆ.
ನೇಮಕ ಮಾಡಿಕೊಳ್ಳುವ ಹುದ್ದೆ ಹಾಗೂ ವೇತನ ವಿವರ ಇಂತಿದೆ. ಜಿಲ್ಲಾ ಆಸ್ಪತ್ರೆಗೆ ತಜ್ಞ ವೈದ್ಯರು-06, ವೇತನ ತಿಂಗಳಿಗೆ ಒಬ್ಬರಿಗೆ 1,20,000 ರೂ. ವೈದ್ಯರು ಜಿಲ್ಲಾ ಆಸ್ಪತ್ರೆಗೆ 12, ತಾಲ್ಲೂಕು ಆಸ್ಪತ್ರೆಗಳಿಗೆ 12 ಸೇರಿದಂತೆ ಒಟ್ಟು 24 ವೈದ್ಯರು, ವೇತನ 60000 ರೂ. ಶುಶ್ರೂಷಕರ ಹುದ್ದೆ ಜಿಲ್ಲಾ ಆಸ್ಪತ್ರೆ-18, ತಾಲ್ಲೂಕು ಆಸ್ಪತ್ರೆಗಳಿಗೆ 12, ಒಟ್ಟು 30, ವೇತನ 25000 ರೂ. ಜಿಲ್ಲಾ ಆಸ್ಪತ್ರೆಗಾಗಿ ಐಸಿಯು ಟೆಕ್ನಿಷಿಯನ್ 01 ಹುದ್ದೆ, ವೇತನ 25000 ರೂ. ಮೆಂಟೇನನ್ಸ್ ಇಂಜಿನಿಯರ್-01 ಹುದ್ದೆ, ವೇತನ 30000 ರೂ. ಬಯೋಮೆಡಿಕಲ್ ಇಂಜಿನಿಯರ್ 01 ಹುದ್ದೆ, ವೇತನ 30000 ರೂ.
ತಜ್ಞ ವೈದ್ಯರ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದಿರಬೇಕು, ವೈದ್ಯರು ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು. ಶುಶ್ರೂಷಕರು ಇಲಾಖೆ ನಿಗದಿಪಡಿಸಿರುವ ಬಿಎಸ್‍ಸಿ/ಜೆಎನ್‍ಎಂ ನರ್ಸಿಂಗ್ ಹೊಂದಿರಬೇಕು ಹಾಗೂ ನೊಂದಣಿ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು. ಉಳಿದ ಹುದ್ದೆಗಳಿಗೆ ನಿಗದಿಪಡಿಸಲಾಗಿರುವ ಅರ್ಹ ವಿದ್ಯಾರ್ಹತೆ ಹೊಂದಿರಬೇಕು. ನೇಮಕಾತಿಗೊಂಡ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳು ಬಂಧಪತ್ರ ಹಾಗೂ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತಾರೆ.
ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಮೇ 10 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಸಲಾಗುವುದು. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮೂಲ ದಾಖಲಾತಿಗಳು ಮತ್ತು ಪ್ರಮಾಣಪತ್ರಗಳೊಂದಿಗೆ ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ತಿಳಿಸಿದ್ದಾರೆ.