ಕಂಪನಿಯಲ್ಲಿ ಉದ್ಯೋಗವನ್ನು ಪಡೆಯಬೇಕು ಅಂದರೆ ನಾನಾ ಅರ್ಹತೆಗಳನ್ನು ಹೊಂದಿರಬೇಕು. ವಿದ್ಯಾರ್ಹತೆ, ಅನುಭವ ಎಲ್ಲವೂ ಪರಿಗಣನೆಗೆ ತೆಗೆದುಕೊಂಡು ಕೆಲಸವನ್ನು ನೀಡಲಾಗುತ್ತೆ.
ಆದರೆ ಇಲ್ಲೊಂದು ಕಡೆಯಲ್ಲಿ ಅಭ್ಯರ್ಥಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಉದ್ಯೋಗ ನೀಡದೇ ಕಂಪನಿ ವಾಪಸ್ ಕಳಿಸಿದೆ..!
ನೇಮಕಾತಿ ಸಂಸ್ಥೆಯ ನಿರ್ದೇಶಕರಾದ ಫಾಯೆ ಏಂಜೆಲೆಟ್ಟಾ ಎಂಬವರು ಸೇಲ್ಸ್ ವಿಭಾಗಕ್ಕೆ ಅಭ್ಯರ್ಥಿಯೊಬ್ಬರನ್ನು ನಾಮ ನಿರ್ದೇಶಿಸಿದ್ದರು. ಕಂಪನಿಯು ಅಭ್ಯರ್ಥಿಯ ಬಗ್ಗೆ ಯಾವ ಅಭಿಪ್ರಾಯ ಹೊಂದಿದೆ ಎಂದು ವಿಚಾರಿಸಿದ ವೇಳೆ ಕಂಪನಿ ನೀಡಿದ ಕಾರಣ ಕೇಳಿ ಫಾಯೆ ಶಾಕ್ ಆಗಿದ್ದಾರೆ.
ನಾನು ನೇಮಕಾತಿ ವಿಭಾಗದಲ್ಲಿ ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದನ್ನು ನಂಬಲು ಆಗುತ್ತಿಲ್ಲ. ಇಂತಹ ಕಾರಣಗಳನ್ನೂ ನೀಡಿ ಕಂಪನಿಯಲ್ಲಿ ಕೆಲಸವನ್ನು ನೀಡುವುದಿಲ್ಲವಾ ಎಂದು ಯೋಚಿಸಲೂ ನನ್ನಿಂದ ಸಾಧ್ಯವಿಲ್ಲ ಎಂದು ಫಾಯೆ ಹೇಳಿದ್ದಾರೆ.
ಅಭ್ಯರ್ಥಿಗೆ ಹತ್ತಿರದ ಸ್ಥಳಗಳ ಬಗ್ಗೆ ಪರಿಚಯವಿದೆ. ಅಲ್ಲದೇ ಅವರು ಉತ್ತಮ ಸಂವಹನ ಕೌಶಲ್ಯವನ್ನೂ ಹೊಂದಿದ್ದಾರೆ. ಆದರೆ ಆಕೆ ತೆಳ್ಳಗಿರುವ ಹುಡುಗಿಯರ ಸಾಲಿಗೆ ಸೇರುತ್ತಿಲ್ಲ. ಸೈಜ್ ಬಗ್ಗೆ ನಾನು ಮಾತನಾಡುತ್ತಿಲ್ಲ. ಆದರೆ ನಮ್ಮ ಅಂಗಸೌಷ್ಠವ ಕೂಡ ಸೇಲ್ಸ್ ವಿಭಾಗದಲ್ಲಿ ಮುಖ್ಯವಾಗಿದೆ. ನಿಮಗೆ ತಿಳಿದಂತೆ ನಾವು ಸಿಬ್ಬಂದಿ ಆಯ್ಕೆಯ ವಿಚಾರದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದ್ದೇವೆ. ನಾನು ಖಡಾಖಂಡಿತವಾಗಿ ಮಹಿಳೆ ಬೇಡ ಎಂದು ಹೇಳುತ್ತಿಲ್ಲ. ಆದರೆ ಮುಂದೆ ಮತ್ತಷ್ಟು ಆಯ್ಕೆಗಳನ್ನು ನೋಡೋಣ ಎಂದು ಫಾಯೆಗೆ ಕಂಪನಿ ಸಂದೇಶ ಕಳುಹಿಸಿದೆ.