ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಂಗಳವಾರ ಒಂದೇ ದಿನ ಕಲಾಪದಲ್ಲಿ 600 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ.
ನಾಗಪ್ರಸನ್ನ ಅವರ ಕೋರ್ಟ್ ಹಾಲ್ ನ ವ್ಯಾಜ್ಯಗಳ ಪಟ್ಟಿಯಲ್ಲಿ 600 ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಲಾಗಿತ್ತು. ಅಷ್ಟೂ ಅರ್ಜಿಗಳ ವಿಚಾರಣೆಯನ್ನು ಮಧ್ಯಾಹ್ನ 3:56 ಗಂಟೆ ಪೂರ್ಣಗೊಳಿಸಿದ್ದಾರೆ. 600 ಪ್ರಕಾರಗಳ ಪೈಕಿ 180 ಅರ್ಜಿಗಳ ಸಂಬಂಧ ಮಧ್ಯಂತರ ಆದೇಶ ಹೊರಡಿಸಿದ್ದಾರೆ. 87 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದಾರೆ.
ಈ ಹಿಂದೆಯೂ ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ನಾಗಪ್ರಸನ್ನ ಹಲವು ದಾಖಲೆ ಬರೆದಿದ್ದಾರೆ. 2023ರ ಜೂನ್ 12ರಂದು ಒಂದೇ ದಿನ 522 ಪ್ರಕರಣಗಳ ವಿಚಾರಣೆ ನಡೆಸಿದ್ದರು. 2023ರ ಡಿಸೆಂಬರ್ 20ರಂದು ಒಂದೇ ದಿನ 50 ತೀರ್ಪುಗಳನ್ನು ಪ್ರಕಟಿಸಿದ್ದರು. ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಮಂಗಳವಾರ ಒಂದೇ ದಿನ 600 ಪ್ರಕರಣಗಳ ವಿಚಾರಣೆ ನಡೆಸುವ ಮೂಲಕ ತ್ವರಿತ ನ್ಯಾಯದಾನದ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಒಂದೇ ದಿನದಲ್ಲಿ ಸುಮಾರು 750 ಅರ್ಜಿ ವಿಲೇವಾರಿ ಮಾಡಿದ್ದರು.