ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ರಚಿಸಲಾದ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಬೆಂಗಳೂರು ನಗರದ ಆಡಳಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಮಹತ್ವದ ಶಿಫಾರಸ್ಸುಗಳನ್ನು ಮಾಡಲಾಗಿದೆ.
ಸಮಿತಿಯು ನಗರಾಭಿವೃದ್ಧಿ ವ್ಯವಹಾರಗಳು, ಶಾಸನ ರಚನಾ ಇಲಾಖೆ, ಕಾನೂನು ಇಲಾಖೆ ಅಧಿಕಾರಿಗಳನ್ನು ಒಳಗೊಂಡಿದ್ದು, ನಾಗರಿಕರು ಮತ್ತು ಸಂಘ-ಸಂಸ್ಥೆಗಳಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ವರದಿಯನ್ನು ಸಿದ್ಧಪಡಿಸಿದೆ.
ವರದಿಯ ಮುಖ್ಯ ಉದ್ದೇಶವು ಬೆಂಗಳೂರು ನಗರದ ಆಡಳಿತವನ್ನು ಸುಧಾರಿಸುವುದು, ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದು ಮತ್ತು ನಗರದ ಅಭಿವೃದ್ಧಿಯನ್ನು ವೇಗಗೊಳಿಸುವುದಾಗಿದೆ.
ವರದಿಯ ಪ್ರಮುಖ ಅಂಶಗಳೆಂದರೆ
- ಬಿಬಿಎಂಪಿಯನ್ನು ಗರಿಷ್ಠ ಏಳು ನಗರ ಪಾಲಿಕೆಗಳಾಗಿ ವಿಭಜಿಸಲು ಶಿಫಾರಸ್ಸು ಮಾಡಲಾಗಿದೆ. ಇದರಿಂದ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತದೆ. ಮೇಯರ್ ಅವರ ಅಧಿಕಾರ ಅವಧಿಯನ್ನು 30 ತಿಂಗಳಿಗೆ ನಿಗದಿಪಡಿಸಲು ಸೂಚಿಸಲಾಗಿದೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಆರ್ಥಿಕ ಅಧಿಕಾರ ನೀಡುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
- ಪ್ರತಿ ಪಾಲಿಕೆಯು ಕನಿಷ್ಠ 10 ಲಕ್ಷ ಜನಸಂಖ್ಯೆ, 300 ಕೋಟಿ ರೂ. ಆದಾಯ ಮತ್ತು 100-200 ವಾರ್ಡ್ಗಳನ್ನು ಹೊಂದಿರಬೇಕು.
- ಪ್ರತಿಯೊಬ್ಬ ಅಭ್ಯರ್ಥಿಯು ಒಂದು ವಾರ್ಡ್ನಲ್ಲಿ ಮಾತ್ರ ಸ್ಪರ್ಧಿಸಬೇಕು.
- ನಗರ ಪಾಲಿಕೆಯನ್ನು ವಿಸರ್ಜನೆ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರವೇ ಹೊಂದಿದೆ.
- ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದೇ ಇದ್ದಲ್ಲಿ ಎರಡು ವರ್ಷಗಳ ಬಳಿಕ ಜಪ್ತಿ ಮಾಡುವುದು. ಆ ಬಳಿಕ ಒಂದು ವರ್ಷದ ಬಳಿಕ ಮಾರಾಟಕ್ಕೆ ಕ್ರಮ ವಹಿಸುವ ಬಗ್ಗೆ ಕಾಲಮಿತಿ ಸಲಹೆ ನೀಡಲಾಗಿದೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯಿದೆ ಅಧಿಸೂಚನೆ ಜಾರಿಯಾದ ತಕ್ಷಣ ಅನುಷ್ಠಾನಕ್ಕೆ ಬರಲಿದೆ.
ಸಮಿತಿಯ ವಾದದ ಪ್ರಕಾರ, ಬೆಂಗಳೂರು ನಗರವು ವಿಸ್ತಾರವಾಗಿದ್ದು, ಬಿಬಿಎಂಪಿ ಒಂದರಿಂದಲೇ ಆಡಳಿತ ನಡೆಸಲು ಕಷ್ಟವಾಗುತ್ತಿದೆ. ಸಣ್ಣ ಪಾಲಿಕೆಗಳನ್ನು ರಚಿಸಿದರೆ, ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬಹುದು. ನಗರದ ನಾಗರೀಕರಿಗೆ ಉತ್ತಮ ಸೌಲಭ್ಯ ಒದಗಿಸಲು, ಮತ್ತು ಆಡಳಿತ ಸುಧಾರಣೆಗೆ ಈ ನಿರ್ಧಾರ ಅವಶ್ಯಕವಾಗಿದೆ. ಮುಂದಿನ ಕ್ರಮವಾಗಿ, ಸರ್ಕಾರವು ಈ ವರದಿಯನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ.