ಅಬುಧಾಬಿ: ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಯುಎಇಯೊಂದಿಗೆ ಹೊಸ ಭೌಗೋಳಿಕ ರಾಜಕೀಯ ಸಂಬಂಧಗಳನ್ನು ಬಲಪಡಿಸಿದ್ದಾರೆ.
ಜಾಗತಿಕ ಹವಾಮಾನ ರಕ್ಷಣೆಯ ಭಾಗವಾಗಿ ಆಯೋಜಿಸಲಾದ ಐಜಿಎಫ್ ಯುಎಇ 2022(ಗ್ಲೋಬಲ್ ಫೋರಮ್) ನಲ್ಲಿ ಭಾಗವಹಿಸಿದ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ಅವರು ಮಹತ್ವದ ಭಾಷಣ ಮಾಡಿದರು.
ಪ್ರಕೃತಿ ಸಂರಕ್ಷಣೆ ಮತ್ತು ಜಾಗತಿಕ ತಾಪಮಾನ ಏರಿಕೆ ತಡೆಗಾಗಿ ನಾವು ಯುಎಇಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಹವಾಮಾನ ಬದಲಾವಣೆಯ ಬಗ್ಗೆ ವಿಶ್ವ ದೇಶಗಳು ಕಾಳಜಿ ವಹಿಸುತ್ತಿವೆ ಎಂದು ಅವರು ಹೇಳಿದ್ದು, ಕೆಲವು ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಜಾಗತೀಕರಣ.. ಜಗತ್ತಿನ ದೇಶಗಳ ಮೇಲೆ ಅದರ ಪರಿಣಾಮವನ್ನು ವಿವರಿಸಿದ ಅವರು, ಸಂಪನ್ಮೂಲಗಳು, ಸೇವೆಗಳು ಮತ್ತು ಅಭಿವೃದ್ಧಿಯನ್ನು ಯಾವುದೇ ಒಂದು ದೇಶಕ್ಕೆ ಸೀಮಿತಗೊಳಿಸದೆ ವಿಶ್ವದ ಎಲ್ಲಾ ದೇಶಗಳಿಗೆ ಸಮಾನವಾಗಿ ವಿತರಿಸುವ ಅಗತ್ಯವಿದೆ ಎಂದು ಹೇಳಿದರು.
ನಮ್ಮಲ್ಲಿ ಸಂಪ್ರದಾಯವಷ್ಟೇ ಅಲ್ಲ, ಆ ಸಂಪ್ರದಾಯದಲ್ಲಿ ಶತಮಾನಗಳ ದೃಢ ಸಂಕಲ್ಪವೂ ಇದೆ. ನಾನು ಇತಿಹಾಸ ಮತ್ತು ಸಂಬಂಧವನ್ನು ಮುಂದಕ್ಕೆ ನೋಡಿದಾಗ, ನಾನು ಖಂಡಿತವಾಗಿಯೂ ಭಾರತ-ಯುಎಇ ಸಂಬಂಧವನ್ನು ಅಗ್ರಸ್ಥಾನದಲ್ಲಿರಿಸುತ್ತೇನೆ ಎಂದು ಅವರು ಹೇಳಿದರು.
ಯುಎಇ ಇಂದು ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಎರಡನೇ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ ಎಂದು ಸೂಚಿಸಿದ ಜೈಶಂಕರ್, ವಿದೇಶದಲ್ಲಿರುವ ಇತರ ದೇಶಗಳಿಗಿಂತ ಹೆಚ್ಚಿನ ಭಾರತೀಯರು ಯುಎಇಯಲ್ಲಿ ವಾಸಿಸುತ್ತಿರುವುದು ಸಂಬಂಧವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ ಎಂದು ಹೇಳಿದರು.
ಯುಎಇ ಭಾರತದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ ಮತ್ತು ಭಾರತವು ಆ ದೇಶದೊಂದಿಗೆ ಮೂರನೇ ಅತಿದೊಡ್ಡ ವ್ಯಾಪಾರ ಸಂಬಂಧವನ್ನು ಹೊಂದಿದೆ. ಭಾರತದಿಂದ ಹೆಚ್ಚಿನ ಭಾರತೀಯರು ಉದ್ಯೋಗಕ್ಕಾಗಿ ಈ ದೇಶಕ್ಕೆ ಹೋಗುತ್ತಿದ್ದಾರೆ. ಯುಎಇ ಜತೆಗಿನ ಭಾರತದ ಬಾಂಧವ್ಯ ಮುಂದೆಯೂ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.