ರಾಜ್ಯಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಶಾಕ್ ನೀಡಿದ್ದ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತ್ತು. ಇದಾದ ಬಳಿಕ ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ.
ಶಿವಸೇನಾ ನಾಯಕ ಮತ್ತು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ, 10-12 ಶಾಸಕರ ಜೊತೆಗೆ ಸೋಮವಾರದ ವಿಧಾನ ಪರಿಷತ್ತಿನ ಚುನಾವಣೆ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಪಕ್ಷದೊಳಗೆ ಬಂಡಾಯದ ವದಂತಿ ಹೆಚ್ಚಿಸಿದೆ.
ಶಿವಸೇನೆಯ ಕೆಲವು ಶಾಸಕರ ಅಡ್ಡ ಮತದಾನದ ಆರೋಪದ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಕುತೂಹಲ ಹೆಚ್ಚಿಸಿದೆ.
ನಾಪತ್ತೆಯಾದ ಶಿವಸೇನೆ ಶಾಸಕರು ಶಿಂಧೆ ಅವರೊಂದಿಗೆ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಹೋಟೆಲ್ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಮಂಗಳವಾರ ಮಧ್ಯಾಹ್ನ ಶಿಂಧೆ ಸೂರತ್‌ನಿಂದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯೂ ಇದೆ.
ಶಿಂಧೆ ಅವರಿಗೆ ಪಶ್ಚಿಮ ಮಹಾರಾಷ್ಟ್ರ, ಮರಾಠವಾಡ ಮತ್ತು ವಿದರ್ಭದ 20 ಶಾಸಕರ ಬೆಂಬಲವಿದೆ ಎಂದು ಶಿವಸೇನೆಯ ಮೂಲಗಳು ತಿಳಿಸಿವೆ.