ದಿನಕ್ಕೊಂದು ತಿರುವು ಪಡೆಯುತ್ತಿದ್ದ ಮಹಾರಾಷ್ಟ್ರ ರಾಜಕಾರಣ ಈಗ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಮತ್ತೊಂದು ಮಜಲು ತಲುಪಿದೆ. ಜುಲೈ 11ರ ವರೆಗೆ ಬಂಡಾಯ ಶಾಸಕರ ಅನರ್ಹತೆ ಕುರಿತು ಯಾವುದೇ ತೀರ್ಮಾನ ಕೈಗೊಳ್ಳದಂತೆ ‘ಸುಪ್ರೀಂ’ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ಬಣ ನಿರಾಳವಾಗಿದೆ.
ಇದರ ಮಧ್ಯೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಬಂಡಾಯ ಶಾಸಕರ ನಾಯಕತ್ವ ವಹಿಸಿರುವ ಏಕನಾಥ್ ಶಿಂಧೆ, ಠಾಕ್ರೆ ಕುಟುಂಬದವರೇ ಆದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಅವರ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲವನ್ನು ಕೆರಳಿಸಿದೆ.
40ಕ್ಕೂ ಅಧಿಕ ಶಾಸಕರ ಬೆಂಬಲದೊಂದಿಗೆ ಏಕನಾಥ್ ಶಿಂಧೆ ಬಣ ಮೇಲುಗೈ ಸಾಧಿಸಿದ್ದು, ನಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಇದು ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ ವಿಚಾರವಾಗಿರುವ ಕಾರಣ ಹಿಂದುತ್ವವನ್ನು ಪ್ರಬಲವಾಗಿ ಪ್ರತಿಪಾದಿಸುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಜೊತೆ ಗುರುತಿಸಿಕೊಳ್ಳಲು ಏಕನಾಥ್ ಶಿಂಧೆ ಬಣ ಮುಂದಾಗಿದೆ ಎಂದು ಹೇಳಲಾಗಿದೆ.