ಬಿಡುಗಡೆಯಾದಾಗಿನಿಂದ ಸಾಕಷ್ಟು ಟೀಕೆ ಮತ್ತು ವಿರೋಧ ಎದುರಿಸುತ್ತಿರುವ ʼಆದಿಪುರುಷ್ʼ ಚಿತ್ರವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮಾಷೆಯಾಗಿ ಟೀಕಿಸಿದ್ದಾರೆ. ಈ ಮೂಲಕ ಚಿತ್ರತಂಡ ಮತ್ತೊಬ್ಬ ಸೆಲೆಬ್ರಿಟಿಯ ಟೀಕೆ ಎದುರಿಸಿದೆ.
ಓಂ ರಾವುತ್ ಅವರ ನಿರ್ದೇಶನದ ಆದಿಪುರುಷ್ ಚಿತ್ರ ಅನೇಕ ಧಾರ್ಮಿಕ ಗುಂಪುಗಳು, ವೀಕ್ಷಕರು ಮತ್ತು ಚಲನಚಿತ್ರ ವಿಮರ್ಶಕರಿಂದ VFX, ಪಾತ್ರಗಳ ಚಿತ್ರಣ ಮತ್ತು ಸಂಭಾಷಣೆಗಳಿಗಾಗಿ ವ್ಯಾಪಕವಾಗಿ ಟೀಕಿಸಲ್ಪಟ್ಟಿದೆ. ಈ ಎಲ್ಲಾ ಹಿನ್ನಡೆಗಳ ನಡುವೆ ಆದಿಪುರುಷ್ ಚಿತ್ರವು ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ವಿಮರ್ಶೆಗೆ ಗುರಿಯಾಗಿದ್ದು, ಸೆಹ್ವಾಗ್ ಚಿತ್ರದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಟ್ವಿಟರ್ನಲ್ಲಿ ಬರೆದಿರುವ ಸೆಹ್ವಾಗ್, ” ಆದಿಪುರುಷ್ ಚಿತ್ರವನ್ನು ನೋಡಿದ ನಂತರ ಕಟಪ್ಪ ಬಾಹುಬಲಿಯನ್ನು ಏಕೆ ಕೊಂದಿದ್ದಾರೆಂದು ನನಗೆ ಅರಿವಾಯಿತು” ಎಂದು ಬರೆದಿದ್ದಾರೆ.
ಸೆಹ್ವಾಗ್ ಅವರ ಟ್ವೀಟ್ ನಟ ಪ್ರಭಾಸ್ ಅವರ 2015 ರ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ: ದಿ ಬಿಗಿನಿಂಗ್ ಅನ್ನು ಉಲ್ಲೇಖಿಸಿದ್ದು ಆ ಚಿತ್ರದಲ್ಲಿ ಬಾಹುಬಲಿ ಪಾತ್ರಧಾರಿಯನ್ನ ಕಟ್ಟಪ್ಪ ಕೊಂದು ಹಾಕಿದ್ದನ್ನ ಸ್ಮರಿಸಬಹುದು.
ಮತ್ತೊಂದೆಡೆ ಆದಿಪುರುಷ್ ಕುರಿತು ಮಾತನಾಡಿರುವ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘವು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಂಬೈ ಪೊಲೀಸರಿಗೆ ಪತ್ರ ಬರೆದಿದ್ದು, ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ಕಥೆಗಾರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದೆ.
16 ಜೂನ್ 2023 ರಂದು ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆದಿಪುರುಷ್ ಎಂಬ ಚಲನಚಿತ್ರವು ಹಿಂದೂ ಧರ್ಮದ ಭಾವನೆಗಳಿಗೆ ಮತ್ತು ಭಗವಾನ್ ರಾಮ್, ಮಾ ಸೀತಾ ಮತ್ತು ರಾಮಸೇವಕ ಭಗವಾನ್ ಹನುಮಾನ್ ಅನ್ನು ನಂಬುವ ಮತ್ತು ಪ್ರಾರ್ಥಿಸುವ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ನಿರ್ದೇಶಕ ಓಂ ರಾವುತ್ ಅವರು ಸಂಭಾಷಣೆ, ವೇಷಭೂಷಣ ಮತ್ತು ಪಾತ್ರಗಳನ್ನು ತಿರುಚಿದ ಮೂಲಕ ರಾಮಾಯಣವನ್ನು ಅಣಕಿಸಿದ್ದಾರೆ ಎಂದು ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ ಹೇಳಿದೆ.