ಬೆಂಗಳೂರು: ಕೊರೋನಾ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ಹೀಗಾಗಿ ಬಿಸಿಯೂಟ ಯೋಜನೆ ಸ್ಥಗಿತವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ವಿತರಿಸಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ಶಾಲೆ ಇಲ್ಲದ ಕಾರಣ ಆಹಾರಧಾನ್ಯ ವಿತರಿಸಲಾಗುತ್ತದೆ. ಮಕ್ಕಳಿಗೆ ಬಿಸಿಯೂಟದ ಬದಲು ಆಹಾರ ಧಾನ್ಯ ನೀಡಲು ಸರ್ಕಾರ 450 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. 2020 -21ನೇ ಶೈಕ್ಷಣಿಕ ವೇಳಾಪಟ್ಟಿಯ ಅನ್ವಯ ಅಕ್ಟೋಬರ್ ತಿಂಗಳವರೆಗಿನ ಅನುದಾನ ಬಿಡುಗಡೆ ಮಾಡಲಾಗಿದೆ. ಅಡುಗೆ ತಯಾರಿಕಾ ವೆಚ್ಚಕ್ಕೆ ಸಮನಾಗಿ ವಿದ್ಯಾರ್ಥಿಗಳಿಗೆ ತೊಗರಿಬೇಳೆ ಆಹಾರಧಾನ್ಯ ವಿತರಿಸಲು ಮಾರ್ಗಸೂಚಿ ರಚಿಸಲು ತಿಳಿಸಲಾಗಿದೆ.
5 ತಿಂಗಳು ಬಿಸಿಯೂಟಕ್ಕೆ ಬಳಸಬೇಕಿದ್ದ ಆಹಾರ ಧಾನ್ಯವನ್ನು ವಿದ್ಯಾರ್ಥಿಗಳ ಮನೆಗಳಿಗೆ ತಲುಪಿಸಲು ಸರ್ಕಾರ ಕ್ರಮಕೈಗೊಂಡಿದೆ. ವಿದ್ಯಾರ್ಥಿ ಸಂಘಟನೆಗಳ ಬೇಡಿಕೆಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ ಕ್ರಮಕೈಗೊಂಡಿದ್ದು ಬಿಸಿಯೂಟ ಯೋಜನೆಗೆ ಬಾಕಿ ಇದ್ದ ಅನುದಾನ ಬಿಡುಗಡೆ ಮಾಡಿ ಮಕ್ಕಳಿಗೆ ಆಹಾರಧಾನ್ಯ ತಲುಪಿಸಲು ಸೂಚನೆ ನೀಡಿದ್ದಾರೆ. ಆಹಾರ ಧಾನ್ಯ ವಿತರಣೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಮಕ್ಕಳ ಮನೆಗೆ ತಲುಪಿಸಲಾಗುವುದು ಎಂದು ಹೇಳಲಾಗಿದೆ.