ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಅದರ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧದ ಭ್ರಷ್ಟಾಚಾರ ಆರೋಪ ಮಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ 500 ಕೋಟಿ ರೂಪಾಯಿ ಲೀಗಲ್ ನೋಟಿಸ್ ಜಾರಿಗೊಳಿಸಿದ್ದು, ಕ್ಷಮೆ ಯಾಚಿಸುವಂತೆ ಒತ್ತಾಯಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ ಅವರು ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಎದುರಿಸುವುದಾಗಿ ತಿರುಗೇಟು ನೀಡಿದ್ದಾರೆ.
ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ ಅವರ ಪರವಾಗಿ ನೀಡಲಾದ 10 ಪುಟಗಳ ಲೀಗಲ್ ನೋಟಿಸ್‌ನಲ್ಲಿ ಅಣ್ಣಾಮಲೈ ಅವರ ‘ಡಿಎಂಕೆ ಫೈಲ್ಸ್’ ಎಂಬ ಹೆಸರಿನಲ್ಲಿ, ಸ್ಟಾಲಿನ್ ಮತ್ತು ಇತರ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು “ಸುಳ್ಳು, ಆಧಾರ ರಹಿತ, ಮಾನ ಹಾನಿಕರ ಆರೋಪ ಮಾಡಿದ್ದಾರೆ” ಎಂದು ಹೇಳಿದೆ.
ಅಣ್ಣಾಮಲೈ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಸ್ಟಾಲಿನ್ ಪರವಾಗಿ ಒತ್ತಾಯಿಸಿರುವ ಭಾರತಿ ಅವರು, ಸಾಮಾಜಿಕ ಮಾಧ್ಯಮ ಮತ್ತು ವೆಬ್‌ಸೈಟ್‌ನಿಂದ ಆರೋಪಗಳನ್ನು ಒಳಗೊಂಡ “ಆಕ್ಷೇಪಾರ್ಹ” ವೀಡಿಯೊಗಳನ್ನು ತೆಗೆದು ಹಾಕಬೇಕು ಎಂದು ಸೂಚಿಸಿದ್ದಾರೆ.