ಹಲಸಿನ ಹಣ್ಣಿನ ಸೀಸನ್ ಶುರುವಾಗಿದೆ. ಹಲಸಿನ ಹಣ್ಣನ್ನ ಬರಿ ಬಾಯಲ್ಲಿ ತಿನ್ನೋದು ಎಷ್ಟೊಂದು ಸ್ವಾದಕರವೋ ಅದೇ ರೀತಿ ಹಲಸಿನ ಹಣ್ಣಿನ ಕಡುಬು, ಪಕೋಡಾ, ಹಲಸಿನ ಕಾಯಿಯಿಂದ ಮಾಡಲಾಗೋ ಚಿಪ್ಸ್ ಎಲ್ಲವೂ ತುಂಬಾನೇ ರುಚಿಕರವಾಗಿರುತ್ತೆ. ಆದರೆ ಹಲಸಿನ ಹಣ್ಣನ್ನ ತಿನ್ನುವ ಭರದಲ್ಲಿ ನಾವು ಅದರ ಬೀಜದ ಕಡೆ ಗಮನವನ್ನೇ ನೀಡೋದಿಲ್ಲ. ಎಷ್ಟೋ ಮಂದಿ ಈ ಬೀಜಗಳನ್ನ ಬಿಸಾಡಿ ಬಿಡ್ತಾರೆ. ಆದರೆ ಈ ಹಲಸಿನ ಬೀಜಗಳಿಂದಲೂ ನೂರೆಂಟು ಲಾಭವಿದೆ ಅನ್ನೋದನ್ನ ಮರೆಯೋ ಹಾಗಿಲ್ಲ.
ಹಲಸಿನ ಹಣ್ಣಿನ ಬೀಜದಲ್ಲಿರುವ ಥಯಾಮಿನ್ ಮತ್ತು ರಿಬೋಫ್ಲಾವಿನ್ ಎಂಬ ಅಂಶ ನಿಮ್ಮ ಕೂದಲು, ಚರ್ಮ ಹಾಗೂ ಕಣ್ಣಿನ ಆರೋಗ್ಯವನ್ನ ಕಾಪಾಡುವಲ್ಲಿ ಸಹಕಾರಿ. ಅಲ್ಲದೇ ಇದರಲ್ಲಿರುವ ಜಿಂಕ್, ಕಬ್ಬಿಣಾಂಶ, ಕ್ಯಾಲ್ಶಿಯಂ, ಪೊಟ್ಯಾಶಿಯಂ ಹಾಗೂ ಮೆಗ್ನಿಶಿಯಂ ಅಂಶ ಕೂಡ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ನಿಮ್ಮ ಮುಖದಲ್ಲಿ ಸುಕ್ಕು ಉಂಟಾಗಿದ್ರೆ ನೀವು ಹಲಸಿನ ಬೀಜದಿಂದ ಈ ಸಮಸ್ಯೆಗೆ ಗುಡ್ ಬೈ ಹೇಳಬಹುದು. ಇದಕ್ಕಾಗಿ ನೀವು ಹಲಸಿನ ಬೀಜಗಳನ್ನ ತಣ್ಣನೆಯ ಹಾಲಿನೊಂದಿಗೆ ರುಬ್ಬಿಕೊಂಡು ನಿತ್ಯ ಈ ಪೇಸ್ಟ್ನ್ನು ಮುಖಕ್ಕೆ ಹಚ್ಚಿ. ಇದರಿಂದ ನಿಮ್ಮ ಮುಖದಲ್ಲಿ ಉಂಟಾದ ಸುಕ್ಕು ಕ್ರಮೇಣವಾಗಿ ಮಾಯವಾಗಲಿದೆ.
ಹಲಸಿನ ಬೀಜದಲ್ಲಿ ಅಗಾಧ ಪ್ರಮಾಣದಲ್ಲಿ ಪ್ರೋಟಿನ್ ಹಾಗೂ ಜೀವಸತ್ವ ಅಡಗಿದೆ. ಇದರಿಂದ ಮಾನಸಿಕ ಒತ್ತಡ ಹಾಗೂ ಚರ್ಮದ ಕಾಯಿಲೆಗಳು ದೂರಾಗಲಿವೆ. ಹಲಸಿನ ಬೀಜಗಳನ್ನ ಸೇವನೆ ಮಾಡೋದ್ರಿಂದ ನಿಮ್ಮ ತ್ವಚೆ ಹಾಗೂ ಕೂದಲಿನ ಆರೋಗ್ಯ ಸುಧಾರಿಸಲಿದೆ.
ಹಲಸಿನ ಬೀಜದಲ್ಲಿ ಕಬ್ಬಿಣಾಂಶ ಇರೋದ್ರಿಂದ ರಕ್ತದ ಕೊರತೆಯಿಂದ ಬಳಲುತ್ತಿರುವವರು ಈ ಹಲಸಿನ ಬೀಜಗಳನ್ನ ಸೇವನೆ ಮಾಡಬಹುದಾಗಿದೆ. ಇದು ದೇಹಕ್ಕೆ ಶಕ್ತಿಯನ್ನ ಒದಗಿಸುವ ಸಾಮರ್ಥ್ಯ ಹೊಂದಿದೆ.