ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಲೇಖಕಿ ಸುಧಾ ಮೂರ್ತಿ ಅವರಿಗೆ ವಾರಕ್ಕೆ 100 ಗಂಟೆ ಇತಿಹಾಸ ಓದಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಕ್ಷಾ ಬಂಧನ ಅಂಗವಾಗಿ ಸುಧಾ ಮೂರ್ತಿ ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ರಕ್ಷಾ ಬಂಧನ ರಾಖಿ ಹಬ್ಬದ ಹಿಂದಿನ ಕಥೆಯನ್ನು ಸುಧಾ ಮೂರ್ತಿ ಹಂಚಿಕೊಂಡಿದ್ದಾರೆ. ರಕ್ಷಾಬಂಧನ ಒಂದು ಪ್ರಮುಖ ಹಬ್ಬವಾಗಿದೆ, ಮೇವಾರ್ ಸಾಮ್ರಾಜ್ಯದ ರಾಣಿ ಕರ್ಣಾವತಿ ಸಂಕಷ್ಟದಲ್ಲಿದ್ದಾಗ ಆಕೆಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಆಕೆಯ ರಾಜ್ಯ ಚಿಕ್ಕದಾಗಿದ್ದ ಕಾರಣ ಆಕ್ರಮಣಕ್ಕೆ ಒಳಗಾಗಿತ್ತು. ಆಕೆ ಮೊಘಲ್ ಚಕ್ರವರ್ತಿ ಹೂಮಾಯೂನ್ ಗೆ ಒಂದು ಸಣ್ಣ ದಾರ ಕಳುಹಿಸುತ್ತಾಳೆ. ನಾನು ಅಪಾಯದಲ್ಲಿದ್ದೇನೆ ನಿಮ್ಮ ಸಹೋದರಿ ಎಂದು ಪರಿಗಣಿಸಿ ರಕ್ಷಿಸಿ ಎಂದು ಬೇಡಿಕೊಳ್ಳುತ್ತಾಳೆ. ಆ ದಾರ ಏನೆಂದು ಹುಮಾಯೂನ್ ಗೆ ತಿಳಿದಿರಲಿಲ್ಲ. ಬೇರೆಯವರ ಬಳಿ ಕೇಳಿದಾಗ ಸಹೋದರನಿಗೆ ಸಹೋದರಿ ಕಟ್ಟುವ ರಾಖಿ. ಇದು ಈ ಭೂಮಿಯ ಸಂಪ್ರದಾಯ ಎಂದು ತಿಳಿಸಿಕೊಡುತ್ತಾರೆ. ಆಗ ರಾಣಿ ಕರ್ಣಾವತಿಗೆ ಸಹಾಯ ಮಾಡಲು ಹುಮಾಯೂನ್ ಮುಂದಾಗುತ್ತಾನೆ. ಆದರೆ, ಆತ ತಲುಪುವ ವೇಳೆಗೆ ಕರ್ಣಾವತಿ ನಿಧನರಾದರು. ಯಾರಾದರೂ ಬಂದು ನಮಗೆ ಸಹಾಯ ಮಾಡಬೇಕು ಎಂಬುದನ್ನು ಈ ದಾರ ಸೂಚಿಸುತ್ತದೆ. ರಾಖಿಗೆ ಬಹಳಷ್ಟು ಅರ್ಥವಿದೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಆದರೆ, ಇದನ್ನು ಒಪ್ಪದ ಅನೇಕರು ಟ್ರೋಲ್ ಮಾಡತೊಡಗಿದ್ದಾರೆ. ಮಹಾಭಾರತದ ಸಮಯದಲ್ಲಿ ರಕ್ಷಾಬಂಧನ ಹುಟ್ಟಿಕೊಂಡಿತು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಶಿಶುಪಾಲನನ್ನು ಕೊಲ್ಲಲು ಶ್ರೀ ಕೃಷ್ಣ ಸುದರ್ಶನ ಚಕ್ರ ಬಳಕೆ ಮಾಡುವಾಗ ಅಜಾಗೂರಕತೆಯಿಂದ ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗನ್ನು ಹರಿದು ಗಾಯಕ್ಕೆ ಬಟ್ಟೆ ಕಟ್ಟುತ್ತಾಳೆ. ಅದಕ್ಕೆ ಪ್ರತಿಯಾಗಿ ಕೃಷ್ಣ ಯಾವಾಗಲೂ ದ್ರೌಪದಿಯನ್ನು ರಕ್ಷಿಸುವ ಭರವಸೆ ನೀಡುತ್ತಾನೆ. ಕೌರವರು ದ್ರೌಪದಿಯ ಸೀರೆ ಸೆಳೆಯುವಾಗ ಕೃಷ್ಣ ರಕ್ಷಿಸುತ್ತಾನೆ. ಇದು ರಕ್ಷಾಬಂಧನದ ಹಿಂದಿನ ಕಥೆ ಎಂದು ಹೇಳಿದ್ದಾರೆ.
ಮತ್ತೆ ಕೆಲವರು ಸುಧಾ ಮೂರ್ತಿಯವರಿಗೆ ನೀವು ವಾರಕ್ಕೆ 100 ಗಂಟೆ ಇತಿಹಾಸ ಓದಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ವಾರಕ್ಕೆ 72 ಗಂಟೆ ಕೆಲಸ ಮಾಡಬೇಕೆಂಬ ಹೇಳಿಕೆಯನ್ನೇ ಬಳಸಿಕೊಂಡು ಸುಧಾಮೂರ್ತಿ ಅವರನ್ನು ಟ್ರೋಲ್ ಮಾಡಲಾಗಿದೆ.