ನವದೆಹಲಿ: ಕಚೇರಿಗೆ ತಡವಾಗಿ ಬರುವ ಕೇಂದ್ರ ಸರ್ಕಾರಿ ನೌಕರರ ಅರ್ಧ ದಿನ ರಜೆ ಕಡಿತಗೊಳಿಸಲಾಗುವುದು. ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಖಡಕ್ ಆದೇಶ ನೀಡಲಾಗಿದೆ. ಇನ್ನು ಮುಂದೆ ಬೆಳಿಗ್ಗೆ 9:15 ರ ನಂತರ ಕಚೇರಿಗೆ ತೆರಳಿದಲ್ಲಿ ಅರ್ಧ ದಿನ ರಜೆ ಕಡಿತವಾಗಲಿದೆ.
ಆಫೀಸಿಗೆ ತಡವಾಗಿ ಬರುವ ಸರ್ಕಾರಿ ನೌಕರರಿಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, 9:15 ರ ನಂತರ ಬರುವ ನೌಕರರ ಅರ್ಧ ದಿನ ರಜೆ ಕಡಿತಗೊಳಿಸುವುದಾಗಿ ಹೇಳಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5:30ರ ವರೆಗೆ ಕಾರ್ಯನಿರ್ವಹಿಸಲಿದ್ದು, ಕೆಲವು ನೌಕರರು ಕಚೇರಿಗೆ ತಡವಾಗಿ ಬಂದು ಬೇಗನೆ ಮನೆಗೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ವಿವಿಧ ಕೆಲಸಗಳಿಗಾಗಿ ಬರುವ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಹೀಗಾಗಿ ಸರ್ಕಾರದಿಂದ ನೌಕರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅನಿವಾರ್ಯವಾಗಿ ತಡವಾದರೆ 15 ನಿಮಿಷ ಮಾತ್ರ ಅವಕಾಶ ನೀಡಲಾಗುತ್ತದೆ. 15 ನಿಮಿಷಕ್ಕಿಂತ ತಡವಾದರೆ ಅವರ ಸಿಎಲ್ ನಲ್ಲಿ ಅರ್ಧ ದಿನದ ರಜೆ ಕಡಿತ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ರಜೆ ಬೇಕು ಎಂದರೆ ಮೊದಲೇ ಅನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಮೊದಲು ರಜೆ ಪಡೆದು ನಂತರ ರಜೆಗೆ ಅಪ್ಲೈ ಮಾಡುವಂತಿಲ್ಲ. ಈ ಮೂಲಕ ಬೇಕಾಬಿಟ್ಟಿಯಾಗಿ ರಜೆ ಹಾಕುವ ನೌಕರರಿಗೂ ಬಿಸಿ ಮುಟ್ಟಿಸಲಾಗಿದೆ. ಎಲ್ಲಾ ಹಂತದ ನೌಕರರು, ಅಧಿಕಾರಿಗಳು ಬಯೋಮೆಟ್ರಿಕ್ ನಲ್ಲಿ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.