ಬೆಂಗಳೂರು : ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ-ಮನೆ ಸಮೀಕ್ಷೆ ಮಾಡುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿರುತ್ತದೆ ಎಂದು ಮಾನ್ಯ ಉಚ್ಚ ನ್ಯಾಯಾಲಯವು ಆದೇಶಿಸಿರುವ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು ಹಾಗೂ ಶಾಲೆಗೆ ದಾಖಲಾಗದ ಮಕ್ಕಳ ಬಗ್ಗೆ ಮಾನ್ಯ ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ ಶಾಲೆಯಿಂದ ಹೊರಗುಳಿದ ಮಕ್ಕಳ ನಿಖರ ಸಂಖ್ಯೆಯನ್ನು ಗುರುತಿಸುವುದು ಅವಶ್ಯಕವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ದಿನಾಂಕ: 30-05-2024 ರಂದು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಇಲಾಖೆರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ mobile app ನಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಿ, ದಿನಾಂಕ: 03-07-2024 ರಂದು ನವೀಕೃತ ಮೊಬೈಲ್ app ನ ಬಳಕೆಯ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ನೋಡಲ್ ಅಧಿಕಾರಿಗಳಿಗೆ ಹಾಗೂ ಮಾಸ್ಟರ್ ಟ್ರೈನರ್ಗಳಿಗೆ ತರಬೇತಿಯನ್ನು ನೀಡಲಾಗಿರುತ್ತದೆ. ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮೀಕ್ಷದಾರರನ್ನು ಗುರುತಿಸಿ ಅವರಿಗೆ ಮಾಸ್ಟರ್ ಟ್ರೈನರ್ಗಳ ಮುಖಾಂತರ ತರಬೇತಿ ನೀಡತಕ್ಕದ್ದು,ಈ ಸಮೀಕ್ಷೆಯನ್ನು ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ (ಬಿಬಿಎಂಪಿ ಒಳಗೊಂಡಂತೆ) ನಡೆಸಲು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಈ ಕೆಳಗಿನಂತೆ ಕ್ರಮಗಳನ್ನು ಅನುಸರಿಸುವುದು.
ಹಂತ-1: ಶಾಲೆಗೆ ದಾಖಲಾಗದಿರುವ ಮಕ್ಕಳನ್ನು ಗುರುತಿಸುವುದು. (Never Enrolied)
1. ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಶಾಲೆಗೆ ದಾಖಲಾಗದ ಮಕ್ಕಳ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸೂಚಿಸಲಾಗಿದೆ. ಇದರಲ್ಲಿ 6 ರಿಂದ 14 ವರ್ಷ ವಯೋಮಾನದ ಮಕ್ಕಳ ಮಾಹಿತಿಯನ್ನು ಒಳಗೊಂಡಿರುವುದು. ಈ ಮಕ್ಕಳ ಮಾಹಿತಿಯನ್ನು ಸಂಗ್ರಹಿಸುವ ಪೂರ್ವದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿರುವ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
2. ಸಮೀಕ್ಷೆಯ ಸಮಯದಲ್ಲಿ ವಲಸೆ ಹೋಗಿದ್ದ ಮಕ್ಕಳು, ಕೆಲವು ದಿನಗಳಲ್ಲಿ ವಾಪಸ್ಸು ಬರುವ ಸಂಭವವಿದ್ದಲ್ಲಿ, ಅಂತಹ ಮಕ್ಕಳನ್ನು ಗಣತಿಯ ಸ್ಥಳದಲ್ಲಿ ಪರಿಗಣಿಸಬೇಕು. ಬೇರೆ ಜಿಲ್ಲೆ / ತಾಲ್ಲೂಕುಗಳಲ್ಲಿ ಒಟ್ಟು ಇರುವ ವಲಸೆ ಮಕ್ಕಳ ಪಟ್ಟಿಯನ್ನು ಪರಸ್ಪರ ಪರಿಶೀಲಿಸಿ, ವಿನಿಮಯ ಮಾಡಿಕೊಂಡು, ಎರಡೂ ಕಡ ಮಕ್ಕಳ ಹೆಸರು ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಳ್ಳತಕ್ಕದ್ದು. ಇದು ಅತಿ ಮುಖ್ಯವಾದ ಕಾರ್ಯವಾಗಿದೆ.
3. ಸಮೀಕ್ಷೆಯಲ್ಲಿ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಶಾಲೆಯಿಂದ ಹೊರಗೆ ಉಳಿದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
4. ಶಾಲೆ ಬಿಟ್ಟ ಮಕ್ಕಳು ಹಾಗೂ ಶಾಲೆಗೆ ಸೇರದ ಮಕ್ಕಳ ಮಾಹಿತಿಯನ್ನು WER (Ward Education Register) ನಲ್ಲಿ ನಿರ್ವಹಿಸುವುದು.
ಹಂತ:2: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ವಿಶೇಷವಾಗಿ ಗಮನಿಸಬೇಕಾದ ಸ್ಥಳಗಳು:
1. ಸಮೀಕ್ಷೆ ಅಲ್ಲದೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ರಹಿತವಾಗಿರುವ ಕೈಗಾರಿಕಾ ಸ್ಥಳಗಳು, ಕೃಷಿ ಕಾರ್ಮಿಕ ವಲಯಗಳು, ಕೊಳೆಗೇರಿಗಳು (ಸ್ಲಂ), ಬಸ್ ಮತ್ತು ರೈಲು ನಿಲ್ದಾಣ, ಧಾರ್ಮಿಕ ಕೇಂದ್ರಗಳು, ಅನಾಥಾಶ್ರಮ, ಬಂದಿಖಾನೆಗಳು, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳು, ಆಸ್ಪತ್ರೆಗಳು, ಹೋಟೆಲ್ಗಳು, ಛತ್ರಗಳು, ಚಿತ್ರಮಂದಿರಗಳು, ಸಣ್ಣ ಕಾರ್ಖಾನೆಗಳು, ತಯಾರಿಸುವ ಸ್ಥಳಗಳು, ಮಂಡಕ್ಕಿ ಭಟ್ಟಿಗಳು ಹಾಗೂ ಇತರೆ ಸ್ಥಳಗಳಲ್ಲಿ ಶಾಲೆಗಳಿಂದ ಮಕ್ಕಳು ಸಿಗುವುದರಿಂದ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ (ಬಿ.ಬಿ.ಎಂ.ಪಿ. ಒಳಗೊಂಡಂತೆ) ಮೇಲ್ಕಾಣಿಸಿದ ಸ್ಥಳಗಳನ್ನು ಮುಂಚಿತವಾಗಿ ಗುರುತಿಸಿಕೊಂಡು ಗಣತಿ ಕಾರ್ಯ ಕೈಗೊಳ್ಳತಕ್ಕದ್ದು ಎಂದು ಸೂಚಿಸಿದೆ.