ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರಸಕ್ತ ಆವೃತ್ತಿಯ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ತಂಡವನ್ನು 27 ರನ್ ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಿದೆ.
ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್.ಸಿ.ಬಿ. ಇತಿಹಾಸ ನಿರ್ಮಿಸಿದೆ. ಒಂಬತ್ತನೇ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ ಗಳಲ್ಲಿ 218 ರನ್ ಗಳಿಸಿತು. ವಿರಾಟ್ ಕೊಹ್ಲಿ 47, ರಜತ್ ಪಾಟೀದಾರ್ 41 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 191 ರನ್ ಗಳಿಸಿ ಪರಾಭವಗೊಂಡಿತು.
ಮೊದಲ 8 ಪಂದ್ಯಗಳ ಪೈಕಿ 7ರಲ್ಲಿ ಸೋತು ಪ್ಲೇ ಆಫ್ ಸ್ಪರ್ಧೆಯಿಂದ ಹೊರ ಬೀಳುವ ಆತಂಕದಲ್ಲಿದ್ದ ಆರ್.ಸಿ.ಬಿ. ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಹೊಸ ಅಧ್ಯಾಯ ಬರೆದಿದೆ.
ಒಂದೇ ಸೀಸನ್ ನಲ್ಲಿ 14 ಪಂದ್ಯಗಳಲ್ಲಿ 150 ಸಿಕ್ಸರ್ ಸಿಡಿಸಿದ ತಂಡ ಆರ್.ಸಿ.ಬಿ. ಆಗಿದೆ. 2008ರಿಂದ 2024ರವರೆಗೆ 9ನೇ ಸಲ ಪ್ಲೇಆಫ್ ಗೆ ಎಂಟ್ರಿ ಕೊಟ್ಟಿದೆ. ಮೂರು ಬಾರಿ ರನ್ನರ್ ಅಪ್ ಆಗಿದೆ.
ಪಂದ್ಯದಲ್ಲಿ 47 ರನ್ ಗಳಿಸಿದ ವಿರಾಟ್ ಕೊಹ್ಲಿ ಆರ್‌ಸಿಬಿ ಪರವಾಗಿ 250ಕ್ಕೂ ಅಧಿಕ ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ 29 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಮತ್ತು ಮೂರು ಬೌಂಡರಿ ಸಹಿತ 47 ರನ್ ಗಳಿಸಿದರು.
ಐಪಿಎಲ್ ನಲ್ಲಿ ಒಂದೇ ಸ್ಟೇಡಿಯಂ ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ 7000ಕ್ಕೂ ಅಧಿಕ ರನ್ ಕಲೆ ಹಾಕಿದ ಮೊದಲ ಬ್ಯಾಟರ್ ಅವರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ 700ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಐಪಿಎಲ್ ಇತಿಹಾಸದಲ್ಲಿಯೇ ಸೀಸನ್ ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್ ಎನ್ನುವ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. 2016ರಲ್ಲಿ 36 ಸಿಕ್ಸರ್ ಸಿಡಿಸಿದ್ದ ಅವರು 2024ರಲ್ಲಿ 37 ಸಿಕ್ಸರ್ ಸಿಡಿಸಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ 14 ಇನಿಂಗ್ಸ್ ಗಳಿಂದ 708 ರನ್ ಕಲೆ ಹಾಕಿದ್ದಾರೆ. ಐದು ಅರ್ಧ ಶತಕ, ಒಂದು ಶತಕ ಸಿಡಿಸಿದ್ದಾರೆ.