ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮೈದಾನದೊಳಗೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆರಗಿದ್ದಾನೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲು ಹಿಡಿದ ಅಭಿಮಾನಿ ವಿಚಾರಣೆ ನಡೆಸಲಾಗಿದೆ. ರಾಯಚೂರಿನಿಂದ ಬಂದಿದ್ದ ಅಪ್ರಾಪ್ತ ಯುವಕ ಹುಚ್ಚಾಟ ನಡೆಸಿದ್ದಾನೆ.
ರೈಲಿನಲ್ಲಿ ರಾಯಚೂರಿನಿಂದ ಬಂದಿದ್ದ 17 ವರ್ಷದ ಅಪ್ರಾಪ್ತ 3000 ರೂ. ನೀಡಿ ಡಿ ಬ್ಲಾಕ್ ಟಿಕೆಟ್ ಖರೀದಿ ಮಾಡಿದ್ದ. ಆತ ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಯಾಗಿದ್ದಾನೆ. ವಿರಾಟ್ ಕೊಹ್ಲಿ ಹಿಡಿದುಕೋ ಎಂದು ಹಿಂದೆ ಕುಳಿತವರು ಕೂಗುತ್ತಿದ್ದರು. ಈ ವೇಳೆ ಗ್ರಿಲ್ ಹಾರಿ ಮೈದಾನದ ಒಳಗೆ ನುಗ್ಗಿದ್ದಾಗಿ ಅಪ್ರಾಪ್ತ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನೆ ಎನ್ನಲಾಗಿದೆ.
ಮೈದಾನಕ್ಕೆ ಅತಿಕ್ರಮ ಪ್ರವೇಶ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಆರ್.ಸಿ.ಬಿ. ಚೇಸ್ ಮಾಡಲು ಸಜ್ಜಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಅಭಿಮಾನಿ ಮೈದಾನಕ್ಕೆ ನುಗ್ಗಿದ್ದ. ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.