ಅಹಮದಾಬಾದ್: ಮೊದಲ ಕ್ವಾಲಿಫಿಯರ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯಗಳಿಸಿದ ಕೆಕೆಆರ್ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಮುಖಮುಖಿಯಾಗಲಿವೆ. ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ ಇದಾಗಿದ್ದು, ಗೆಲುವಿಗಾಗಿ ಎಲ್ಲಾ ಕಾರ್ಯತಂತ್ರಗಳನ್ನು ರೂಪಿಸಿವೆ.
ಸತತ ಸೋಲುಗಳಿಂದ ಹೊರಬಂದು ನಿರಂತರ ಗೆಲುವುಗಳನ್ನು ಸಾಧಿಸಿ ಪ್ಲೇಆಫ್ ಪ್ರವೇಶಿಸಿರುವ ಆರ್ಸಿಬಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಹೊಂದಿದೆ. ರಿಯಾನ್, ಸ್ಯಾಮ್ಸನ್ ಉತ್ತಮ ಫಾರ್ಮ್ ನಲ್ಲಿದ್ದು, ಚಹಾಲ್, ಅಶ್ವಿನ್ ಸ್ಪಿನ್ ಕೈಚಳಕ ರಾಜಸ್ಥಾನ ರಾಯಲ್ಸ್ ನ ಬಲವಾಗಿದೆ. ಕಳೆದ ಆರು ಪಂದ್ಯಗಳಲ್ಲಿ ಜಯ ಸಾಧಿಸಿದ ಆರ್ಸಿಬಿ ಅತ್ಯಧಿಕ ರನ್ ರೇಟ್ ಕಾಯ್ದುಕೊಂಡಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿಯೂ ಮಿಂಚುವ ಹುಮ್ಮಸ್ಸಿನಲ್ಲಿದೆ.
ನಾಯಕ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಆರ್ಸಿಬಿ ಬ್ಯಾಟಿಂಗ್ ಬಲವಾಗಿದ್ದಾರೆ. ಸಂಜೆ 7.30ಕ್ಕೆ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿದೆ. ಉಭಯ ತಂಡಗಳು 30 ಸಲ ಮುಖಾಮುಖಿಯಾಗಿದ್ದು, ಆರ್‌ಸಿಬಿ 15 ಬಾರಿ, ರಾಜಸ್ಥಾನ 13 ಬಾರಿ ಗೆಲುವು ಕಂಡಿದೆ. ಎರಡು ಪಂದ್ಯಗಳ ಫಲಿತಾಂಶ ಬಂದಿಲ್ಲ. ಇಂದಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.