ಬೆಂಗಳೂರು: ಆರ್ ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರಣ ಎಂದು ನಟ ದರ್ಶನ್ ಅಭಿಮಾನಿಗಳು ಆರೋಪಿಸಿದ್ದು, ಕೀಳು ಮಟ್ಟದಲ್ಲಿ ಅವಮಾನ ಮಾಡಿದ್ದಾರೆ. ಇದರಿಂದ ನೊಂದಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು, ದರ್ಶನ್ ಅಭಿಮಾನಿ ಬಳಗದ ವಿರುದ್ಧ ದೂರು ನೀಡಲು ಮುಂದಾಗಿವೆ.
ಆರ್ ಸಿಬಿ ತಂದ ಈ ಬಾರಿ ಐಪಿಎಲ್ ನಲ್ಲಿ ಸೋಲುವ ಮುನ್ಸೂಚನೆ ಸಿಕ್ಕಿದೆ. ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತು ಒಂದು ಮ್ಯಾಚ್ ಗೆದ್ದಿದೆ. ಆರ್ ಸಿಬಿ ಸೋಲಿಗೆ ಮ್ಯಾನೇಜ್ ಮೆಂಟ್ ಕಾರಣವೆಂದು ಕೆಲವರು ದೂರುತ್ತಿದ್ದರೆ ಇನ್ನು ಕೆಲವರು ತಂಡದ ಪರ್ಫಾರ್ಮೆನ್ಸ್ ಸರಿಯಿರಲಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಟ ದರ್ಶನ್ ಅಭಿಮಾನಿಗಳು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಆರೋಪ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆರ್ ಸಿಬಿ ಅನ್ ಬಾಕ್ಸಿಂಗ್ ಇವೆಂಟ್ ಗೆ ಅಶ್ವಿನಿ ಕೂಡ ತೆರಳಿದ್ದರು. ‘ಪತಿ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದೇ ಕಾರಣಕ್ಕೆ ಆರ್ ಸಿಬಿ ಸೋಲುತ್ತಿದೆ’ ಎಂದು ಕೀಳುಮಟ್ಟದಲ್ಲಿ ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ.
ಗಜಪಡೆ ಎಂಬ ಹೆಸರಿನ ಟ್ವಿಟರ್ ಅಕೌಂಟ್ ಮೂಲಕ ಈ ರೀತಿ ಟ್ವೀಟ್ ಮಾಡಲಾಗಿದ್ದು, ಹಲವರು ತೀವ್ರವಾಗಿ ಖಂಡಿಸಿದ್ದಾರೆ. ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು ಎಂದು ಹೇಳಿದ್ದಾರೆ. ಅನೇಕರು ದರ್ಶನ್ ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕು ಎಂದು ಹೇಳಿದ್ದಾರೆ.
ಇಂತಹ ಪೋಸ್ಟ್ ಮಾಡಿರುವುದು ನಿಜಕ್ಕೂ ದರ್ಶನ್ ಅಭಿಮಾನಿಯೇ ಅಥವಾ ನಕಲಿ ಫೇಸ್ ಬುಕ್ ಖಾತೆಯೇ? ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಆದರೆ ಪೋಸ್ಟ್ ಗಳನ್ನು ನೋಡಿ ಸಿಟ್ಟಿಗೆದ್ದಿರುವ ಅಪ್ಪು ಅಭಿಮಾನಿಗಳು ಕಮಿಷ್ನರ್ ಭೇಟಿಯಾಗಿ ದೂರು ನೀಡಲು ಮುಂದಾಗಿದ್ದಾರೆ. ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದಾರೆ. ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ ಎಂದಿದ್ದಾರೆ.