IPL 2024ರ 39 ಪಂದ್ಯಗಳು ಈಗಾಗ್ಲೇ ಪ್ರೇಕ್ಷಕರನ್ನು ರಂಜಿಸಿವೆ. ಇಲ್ಲಿಂದ ಪ್ಲೇ ಆಫ್ ತಲುಪುವ ತಂಡಗಳ ಓಟ ಬಹಳ ಕುತೂಹಲಕಾರಿಯಾಗಿರಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಹಂತದಲ್ಲಿದೆ. ಮುಂದಿನ ಪಂದ್ಯವನ್ನು ಗೆದ್ದರೆ ಈ ಋತುವಿನಲ್ಲಿ ಪ್ಲೇ ಆಫ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ತಲುಪುವುದು ಅನುಮಾನ. ಆರ್‌ಸಿಬಿ ಮಾತ್ರವಲ್ಲ, ಮುಂಬೈ ಇಂಡಿಯನ್ಸ್ ಸೇರಿದಂತೆ ಇನ್ನೂ ಅನೇಕ ತಂಡಗಳು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿವೆ.
ಡುಪ್ಲೆಸಿಸ್ ನಾಯಕತ್ವದಲ್ಲಿ ಐಪಿಎಲ್ ಆಡುತ್ತಿರುವ ಆರ್‌ಸಿಬಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೆ, ತಂಡವು 8 ಪಂದ್ಯಗಳಲ್ಲಿ 7 ರಲ್ಲಿ ಸೋತಿದೆ. ಇನ್ನೂ 6 ಪಂದ್ಯಗಳನ್ನು ಆಡಬೇಕಿದೆ. ಆರ್‌ಸಿಬಿ ಪ್ಲೇಆಫ್‌ನ ರೇಸ್‌ನಲ್ಲಿ ಉಳಿಯಬೇಕೆಂದರೆ ಉಳಿದ ಎಲ್ಲಾ ಪಂದ್ಯಗಳನ್ನು ಉತ್ತಮ ರನ್‌ರೇಟ್‌ನಿಂದ ಗೆಲ್ಲಬೇಕು. ಅಷ್ಟೇ ಅಲ್ಲ ಆರ್‌ಸಿಬಿಯ ಪ್ಲೇಆಫ್ ಅವಕಾಶ ಇತರ ತಂಡಗಳ ಫಲಿತಾಂಶಗಳನ್ನು ಸಹ ಅವಲಂಬಿಸಿರುತ್ತದೆ. ಏಕೆಂದರೆ ಯಾವುದೇ ತಂಡ ನೇರವಾಗಿ ಅರ್ಹತೆ ಪಡೆಯಲು 16 ಅಂಕಗಳ ಅಗತ್ಯವಿದೆ. ಇನ್ನು ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೂ ಆರ್‌ಸಿಬಿ ಕೇವಲ 14 ಅಂಕಗಳನ್ನು ಗಳಿಸಲಿದೆ. ಹಾಗಾಗಿ ಆರ್‌ಸಿಬಿಗೆ ಪ್ಲೇಆಫ್ ತಲುಪುವುದು ಅಸಾಧ್ಯ ಎನಿಸುತ್ತಿದೆ.
ಆರ್‌ಸಿಬಿ ಹೊರತಾಗಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿವೆ. ಪಂಜಾಬ್ ಕಿಂಗ್ಸ್ 8 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಕೇವಲ 4 ಅಂಕಗಳನ್ನು ಹೊಂದಿದೆ. ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 8 ಪಂದ್ಯಗಳಲ್ಲಿ 3ನ್ನು ಗೆದ್ದಿವೆ. ಈ ಎರಡೂ ತಂಡಗಳು ಮುಂಬರುವ 6 ಪಂದ್ಯಗಳಲ್ಲಿ ಕನಿಷ್ಠ 5 ಗೆಲುವನ್ನು ದಾಖಲಿಸಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ಪ್ಲೇಆಫ್‌ನ ರೇಸ್‌ನಲ್ಲಿ ಉಳಿಯುತ್ತವೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಮ್ಮ ಉಳಿದ 6 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕು . ಈ ಎರಡೂ ತಂಡಗಳು ತಲಾ 8 ಅಂಕಗಳನ್ನು ಗಳಿಸಿವೆ. ಮತ್ತೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಲಾ 10 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಲಗ್ಗೆ ಇಡುತ್ತಿವೆ.