ಮಂಗಳವಾರದಂದು ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜಾಯಿಂಟ್ಸ್ ತಂಡ 18 ರನ್ನುಗಳ ಅಂತರದಿಂದ ಪರಾಭವಗೊಂಡಿದೆ. ಸೋಲಿನ ಬಳಿಕ ಇದರ ಹಿಂದಿನ ಕಾರಣವನ್ನು ಲಕ್ನೋ ಸೂಪರ್ ಜಾಯಿಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಬಿಚ್ಚಿಟ್ಟಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ ನಲ್ಲಿ ಮಾತನಾಡಿದ ಕೆ.ಎಲ್. ರಾಹುಲ್, ಜೊತೆಯಾಟದ ಕೊರತೆಯೇ ತಂಡದ ಸೋಲಿಗೆ ಕಾರಣ ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಕೇವಲ 7 ರನ್ನುಗಳಿಗೆ ರಾಯಲ್ ಚಾಲೆಂಜರ್ಸ್ ತಂಡದ ಎರಡು ವಿಕೆಟ್ ಗಳನ್ನು ಪಡೆದಿದ್ದರೂ ಸಹ ನಂತರದಲ್ಲಿ ನಾವು ಅದನ್ನು ಮುಂದುವರಿಸಿಕೊಂಡು ಹೋಗಲು ಆಗಲಿಲ್ಲ. ಅಲ್ಲದೆ ಫಾಫ್ ಡುಪ್ಲೆಸಿಸ್ ಅವರ 96 ರನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಮೊತ್ತ ಕಲೆಹಾಕಲು ಸಹಾಯಕವಾಗಿತ್ತು ಎಂದು ಹೇಳಿದ್ದಾರೆ.
ಈವರೆಗೆ ಏಳು ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5ರಲ್ಲಿ ಗೆಲುವು ಕಂಡಿದ್ದು, 10 ಅಂಕಗಳೊಂದಿಗೆ ಪಾಯಿಂಟ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಲಕ್ನೋ ಸೂಪರ್ ಜಾಯಿಂಟ್ಸ್ ತಂಡ್ ಏಳು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ.