ಕೆಲವೊಬ್ಬರು ವಾಹನ ಖರೀದಿಸುವ ವೇಳೆ RC ಯಲ್ಲಿ ನಮೂದಾಗಿರುವ ವಾಹನದ ಬಣ್ಣವನ್ನು ಬಳಿಕ ಬದಲಾಯಿಸುತ್ತಾರೆ. ಆದರೆ ಈ ಕುರಿತು ಆರ್ ಟಿ ಓ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು ನಮೂದಿಸಿಕೊಳ್ಳುವ ಕಾರ್ಯ ಮಾಡುವುದಿಲ್ಲ. ಅಂತವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಈ ರೀತಿ ನಮೂದಿಸಿದ ಬಣ್ಣವನ್ನು ಬದಲಾಯಿಸಿದ್ದಲ್ಲದೆ, ಬೈಕ್ ಸೈಲೆನ್ಸರ್ ಕೂಡ ಪರಿವರ್ತಿಸಿ ಹೆಚ್ಚು ಶಬ್ದ ಬರುವಂತೆ ಮಾರ್ಪಡಿಸಿದ್ದ ಯುವಕ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುವಾಗ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇದೀಗ ನ್ಯಾಯಾಲಯ ಈ ಎಲ್ಲ ಕಾರಣಗಳಿಗಾಗಿ 6,500 ರೂಪಾಯಿ ದಂಡ ವಿಧಿಸಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಗಗನ್ ಎಂಬಾತನಿಗೆ ಭದ್ರಾವತಿಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಯತೀಶ್ ದಂಡ ವಿಧಿಸಿದ್ದಾರೆ. ಈ ಕುರಿತಂತೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ರಂಗನಾಥ್, ಗಗನ್ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.