ಮುಂಬೈ: ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೆಪೊ ದರ ಕಡಿತದ ಮೂಲಕ ಬಡ್ಡಿ ದರ ಇಳಿಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಒತ್ತಾಯಿಸಿದ್ದಾರೆ.
ಗುರುವಾರ ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಯುಷ್ ಗೋಯಲ್, ರೆಪೊ ದರ ನಿರ್ಧಾರಕ್ಕೆ ಆರ್ಬಿಐ ರೂಪಿಸಿರುವ ಹಣದುಬ್ಬರದ ಮಾನದಂಡವನ್ನು ಪರಾಮರ್ಶೆ ಮಾಡಬೇಕೆಂದು ತಿಳಿಸಿದ್ದಾರೆ.
ಆರ್ಥಿಕತೆ ಬೆಳವಣಿಗೆಗೆ ಉತ್ತೇಜನ ನೀಡುವ ಅಗತ್ಯವಿದ್ದು, ಆರ್‌ಬಿಐ ರೆಪೊ ದರ ಕಡಿತಗೊಳಿಸಲಿದೆ ಎನ್ನುವ ಭರವಸೆ ನನಗಿದೆ. ರೆಪೊ ದರ ಕಡಿತದ ಬಗ್ಗೆ ನಿರ್ಧರಿಸುವಾಗ ಆಹಾರ ಹಣದುಬ್ಬರದ ಸ್ಥಿತಿಗತಿ ಅವಲೋಕಿಸುವುದು ಸಂಪೂರ್ಣ ದೋಷಪೂರಿತ ಸಿದ್ಧಾಂತವಾಗಿದೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ರೆಪೊ ದರ ನಿರ್ಧಾರಕ್ಕೆ ಆರ್ಬಿಐ ರೂಪಿಸಿದ ಹಣದುಬ್ಬರದ ಮಾನದಂಡವನ್ನು ಪರಾಮರ್ಶೆ ನಡೆಸಬೇಕೆಂದು ಕೇಂದ್ರ ಸಚಿವರೊಬ್ಬರು ಹೇಳಿಕೆ ನೀಡಿರುವುದು ಇದೇ ಮೊದಲಾಗಿದೆ.