![](https://kannadadunia.com/wp-content/uploads/2022/03/RBI-1200x600-1.jpg)
ಮುಂಬೈ: ಆರ್‌ಬಿಐ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಇರುವ 50 ರೂಪಾಯಿ ಮುಖಬೆಲೆಯ ನೋಟುಗಳನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಶಕ್ತಿಕಾಂತ್ ದಾಸ್ ಅವರ ಅವಧಿ ಕಳೆದ ಡಿಸೆಂಬರ್ ನಲ್ಲಿ ಅಂತ್ಯವಾದ ನಂತರ ನೇಮಕವಾದ ಸಂಜಯ್ ಮಲ್ಹೋತ್ರಾ ಅವರ ಸಹಿಯನ್ನು 50 ರೂಪಾಯಿ ಹೊಸ ನೋಟುಗಳು ಹೊಂದಿರುತ್ತವೆ. ಬೇರೆ ಬದಲಾವಣೆ ಇರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.
ಶಕ್ತಿಕಾಂತ್ ದಾಸ್ ಅವರ ಅಧಿಕಾರವಧಿ ಪೂರ್ಣಗೊಂಡ ನಂತರ ಕಳೆದ ವರ್ಷ ಡಿಸೆಂಬರ್ ನಲ್ಲಿ ಸಂಜಯ್ ಮಲ್ಹೋತ್ರಾ ಅಧಿಕಾರ ವಹಿಸಿಕೊಂಡಿದ್ದರು. ಮಹಾತ್ಮ ಗಾಂಧಿ ಭಾವಚಿತ್ರ ಇರುವ ನೋಟುಗಳ ಸರಣಿಯಂತೆಯೇ ಈ ಹೊಸ ನೋಟುಗಳನ್ನು ವಿನ್ಯಾಸಗೊಳಿಸಲಾಗಿದೆ. ಹಳೆಯ ನೋಟುಗಳಿಗೆ ಅನ್ವಯವಾಗುವ ನಿಯಮಗಳು ಹೊಸ ನೋಟುಗಳಿಗೂ ಅನ್ವಯವಾಗುತ್ತವೆ ಎಂದು ಹೇಳಲಾಗಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ಹೆಚ್ಚಿನ ಕರೆನ್ಸಿ ನೋಟುಗಳು ಶಕ್ತಿಕಾಂತ್ ದಾಸ್ ಅವರ ಸಹಿಯೊಂದಿಗೆ ಮುದ್ರಿಸಲ್ಪಟ್ಟಿವೆ. ಬುಧವಾರ ಆರ್.ಬಿ.ಐ. ಮಹಾತ್ಮ ಗಾಂಧಿ ಸರಣಿಯ ಹೊಸ 50 ರೂ. ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಘೋಷಿಸಿದೆ.
50 ರೂಪಾಯಿ ಹೊಸ ನೋಟುಗಳನ್ನು ಮುದ್ರಿಸುವುದಾಗಿ ಆರ್ಬಿಐ ಘೋಷಿಸಿರುವುದರಿಂದ ಹಳೆಯ ನೋಟುಗಳು ಮಾನ್ಯವಾಗಿರುತ್ತವೆಯೇ? ಅವುಗಳನ್ನು ಹಿಂಪಡೆಯಲಾಗುತ್ತದೆಯೇ ಎನ್ನುವ ಬಗ್ಗೆ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಆರ್ಬಿಐ ಸ್ಪಷ್ಟನೆ ನೀಡಿದ್ದು, ಹೊಸ ನೋಟುಗಳನ್ನು ಮುದ್ರಿಸಿದರೂ ಹಳೆಯ ನೋಟುಗಳು ಎಂದಿನಂತೆ ಚಲಾವಣೆಯಲ್ಲಿ ಇರುತ್ತವೆ. ದೇಶದ ಜನ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲವೆಂದು ಹೇಳಿದೆ.