alex Certify BIG NEWS: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ನಿಂದ 100 ಟನ್ ಚಿನ್ನ ತಂದ RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ನಿಂದ 100 ಟನ್ ಚಿನ್ನ ತಂದ RBI

RBI moves 1 lakh kg of gold from UK to its vaults in India: Report

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ರಿಟನ್ ನಿಂದ ಸುಮಾರು 100 ಟನ್ (1 ಲಕ್ಷ ಕಿಲೋ ಗ್ರಾಂ) ಚಿನ್ನವನ್ನು ಭಾರತಕ್ಕೆ ತಂದಿದೆ. 1991ರ ನಂತರ ಭಾರತವು ಇಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ತಂದಿರುವುದು ಇದೇ ಮೊದಲು.

ಆರ್‌ಬಿಐ ತನ್ನ ಅರ್ಧಕ್ಕಿಂತ ಹೆಚ್ಚು ಚಿನ್ನವನ್ನು ವಿದೇಶದಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್‌ಗಳ ಸುರಕ್ಷಿತ ಕಸ್ಟಡಿಯಲ್ಲಿದೆ. ಇದರಲ್ಲಿ ಸರಿಸುಮಾರು ಮೂರನೇ ಒಂದು ಭಾಗವನ್ನು ಮಾತ್ರ ದೇಶೀಯವಾಗಿ ಸಂಗ್ರಹಿಸಲಾಗಿದೆ.
ಚಿನ್ನ ಸಂಗ್ರಹಿಸಿಟ್ಟುಕೊಳ್ಳಲು ಬ್ಯಾಂಕ್ ಆಫ್ ಇಂಗ್ಲೆಂಡ್‌ಗೆ , ಆರ್ ಬಿ ಐ ನೀಡುತ್ತಿದ್ದ ಶುಲ್ಕದ ಹಣ ಇದರಿಂದ ಉಳಿತಾಯವಾಗಲಿದೆ.

ಆರ್‌ಬಿಐ ಬಿಡುಗಡೆ ಮಾಡಿದ ವಾರ್ಷಿಕ ಮಾಹಿತಿಯ ಪ್ರಕಾರ ಮಾರ್ಚ್ 31, 2024 ರಂತೆ ಆರ್ ಬಿ ಐ ತನ್ನ ವಿದೇಶಿ ವಿನಿಮಯ ಮೀಸಲು ಭಾಗವಾಗಿ 822.10 ಟನ್ ಚಿನ್ನವನ್ನು ಹೊಂದಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಆರ್ ಬಿ ಐ 794.63 ಟನ್‌ ಚಿನ್ನ ಹೊಂದಿತ್ತು.

ಖ್ಯಾತ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ “ಯಾರಿಗೂ ಗೋಚರವಾಗದಂತೆ ಆರ್‌ಬಿಐ ತನ್ನ 100 ಟನ್ ಚಿನ್ನವನ್ನು ಬ್ರಿಟನ್ ನಿಂದ ಭಾರತಕ್ಕೆ ಸ್ಥಳಾಂತರಿಸಿದೆ” ಎಂದು ಹೇಳಿದರು.

“ಬಹುತೇಕ ದೇಶಗಳು ತಮ್ಮ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಇರಿಸುತ್ತವೆ. ಇದಕ್ಕಾಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಭಾರತವು ಈಗ ತನ್ನ ಹೆಚ್ಚಿನ ಚಿನ್ನವನ್ನು ತನ್ನಲ್ಲೇ ಇಟ್ಟುಕೊಳ್ಳುತ್ತಿದೆ. ಬಿಕ್ಕಟ್ಟಿನ ಮಧ್ಯೆ 1991 ರಲ್ಲಿ ರಾತ್ರೋರಾತ್ರಿ ಚಿನ್ನವನ್ನು ಸಾಗಿಸಿ ತರಲಾಗಿತ್ತು. ಅಂತಹ ಸ್ಥಿತಿಯಿಂದ ಇದೀಗ ನಾವು ಬಹಳ ದೂರ ಸಾಗಿದ್ದೇವೆ. ನನ್ನ ಪೀಳಿಗೆಯವರಿಗೆ 1990-91ರಲ್ಲಿ ಚಿನ್ನದ ಸಾಗಣೆಯು ನಾವು ಎಂದಿಗೂ ಮರೆಯಲಾಗದ ವೈಫಲ್ಯದ ಕ್ಷಣವಾಗಿದೆ. ಅದಕ್ಕಾಗಿಯೇ ಈ ಚಿನ್ನದ ಸಾಗಣೆಗೆ ವಿಶೇಷ ಅರ್ಥವಿದೆ” ಎಂದು ಅವರು ಹೇಳಿದರು.

1991 ರಲ್ಲಿ ಏನಾಯಿತು?

1991 ರಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಚಂದ್ರಶೇಖರ್ ಸರ್ಕಾರವು ಹಣವನ್ನು ಸಂಗ್ರಹಿಸಲು ಚಿನ್ನವನ್ನು ಒತ್ತೆ ಇಟ್ಟಿತು. ಜುಲೈ 4 ಮತ್ತು 18 ರ ನಡುವೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್ ಚಿನ್ನವನ್ನು ಒತ್ತೆಯಿಟ್ಟು $400 ಮಿಲಿಯನ್ ಸಾಲ ಪಡೆದುಕೊಂಡಿತು.

ಸುಮಾರು 15 ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ ಆರ್‌ಬಿಐ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 200 ಟನ್ ಚಿನ್ನವನ್ನು ಖರೀದಿಸಿತು.

ಇತ್ತೀಚಿನ ವರ್ಷಗಳಲ್ಲಿ, ಆರ್‌ಬಿಐ ಚಿನ್ನವನ್ನು ಹೆಚ್ಚಾಗಿ ಖರೀದಿಸುತ್ತಿದೆ. ಚಿನ್ನವನ್ನು ಹಿಡಿದಿಟ್ಟುಕೊಳ್ಳುವ ಆರ್ ಬಿ ಐ ತಂತ್ರವು ಪ್ರಾಥಮಿಕವಾಗಿ ಅದರ ವಿದೇಶಿ ಕರೆನ್ಸಿ ಆಸ್ತಿಗಳನ್ನು ವೈವಿಧ್ಯಗೊಳಿಸುವುದು, ಹಣದುಬ್ಬರದ ವಿರುದ್ಧ ರಕ್ಷಣೆ ಮತ್ತು ವಿದೇಶಿ ಕರೆನ್ಸಿ ಅಪಾಯಗಳನ್ನು ತಗ್ಗಿಸುವ ಗುರಿಯನ್ನು ಹೊಂದಿದೆ.

ಡಿಸೆಂಬರ್ 2017 ರಿಂದ ಆರ್‌ಬಿಐ ನಿಯಮಿತವಾಗಿ ಮಾರುಕಟ್ಟೆಯಿಂದ ಚಿನ್ನವನ್ನು ಖರೀದಿಸುತ್ತಿದೆ. ಇದರ ಪರಿಣಾಮವಾಗಿ, ಭಾರತದ ಒಟ್ಟು ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು ಡಿಸೆಂಬರ್ 2023 ರ ಅಂತ್ಯದ ವೇಳೆಗೆ 7.75% ರಿಂದ ಏಪ್ರಿಲ್ 2024 ರ ಅಂತ್ಯದ ವೇಳೆಗೆ ಸುಮಾರು 8.7% ಕ್ಕೆ ಏರಿತು.

ಮುಂಬೈನ ಮಿಂಟ್ ರಸ್ತೆ ಮತ್ತು ನಾಗ್ಪುರದಲ್ಲಿರುವ ಆರ್‌ಬಿಐ ಕಟ್ಟಡಗಳಲ್ಲಿ ಚಿನ್ನವನ್ನು ಸಂಗ್ರಹಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...