ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೇಶದ ಸುಮಾರು 2 ಕೋಟಿ ಹೂಡಿಕೆದಾರರಿಗೆ ಬಿಗ್ ಶಾಕ್ ನೀಡಿದ್ದಾರೆ.
ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಸಾಕಷ್ಟು ಅಪಾಯಕಾರಿ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶಕ್ತಿಕಾಂತ್ ದಾಸ್, ಈಗಾಗಲೇ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸುವ ಉದ್ದೇಶವಿಲ್ಲ. ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್‌ನ ನಿಲುವು ಬದಲಾಗುವುದಿಲ್ಲ. ಇದು ಇತರ ಮಾರುಕಟ್ಟೆಗಳಿಗೆ ಒಳ್ಳೆಯದಾದ್ರೂ ನಮಗೆ ಒಳ್ಳೆಯದಲ್ಲ ಎಂದಿದ್ದಾರೆ.
ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳಿಗೆ ಇದು ಗಂಭೀರ ಬೆದರಿಕೆ ಎಂದು ದಾಸ್ ಈ ಹಿಂದೆಯೂ ಹೇಳಿದ್ದರು. ಕ್ರಿಪ್ಟೋಕರೆನ್ಸಿ ಒಳ್ಳೆಯದು ಎನ್ನಲು ಸಾಧ್ಯವಿಲ್ಲ. ಅದನ್ನು ನಾನೆಂದು ಸಮರ್ಥಿಸಿಕೊಳ್ಳುವುದಿಲ್ಲ. ಅದ್ರಲ್ಲಿ ಹೂಡಿಕೆ ಮಾಡುವುದು ಹೆಚ್ಚು ಅಪಾಯಕಾರಿ. ಇದು ನನ್ನ ಹಾಗೂ ಬ್ಯಾಂಕಿನ ಅಭಿಪ್ರಾಯ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಕ್ರಿಪ್ಟೋವನ್ನು ನಿಯಂತ್ರಿಸಬೇಕು ಎನ್ನುವ ಪ್ರಶ್ನೆಗೆ ಶಕ್ತಿಕಾಂತ್ ದಾಸ್ ಉತ್ತರ ನೀಡಿದ್ದಾರೆ. ಎಲ್ಲಿಯೂ ಗೋಚರಿಸದ ಉದ್ಯಮವನ್ನು ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಅವರು ಮರುಪ್ರಶ್ನೆ ಮಾಡಿದ್ದಾರೆ.
ಕ್ರಿಪ್ಟೋಕರೆನ್ಸಿಯಂತಹ ಡಿಜಿಟಲ್ ಕರೆನ್ಸಿಯನ್ನು ತಿರಸ್ಕರಿಸುವ ಮೂಲಕ ನಾವು ನಮ್ಮದೇ ಆದ ಡಿಜಿಟಲ್ ಕರೆನ್ಸಿಯನ್ನು ರಚಿಸಿದ್ದೇವೆ. ಸದ್ಯ ಬೃಹತ್ ಪಾವತಿಗೆ ಅದನ್ನು ಬಳಸಲಾಗುತ್ತಿದ್ದು, ಮುಂದೆ ಅದನ್ನು ಚಿಲ್ಲರೆ ಗ್ರಾಹಕರ ಬಳಿ ಕೊಂಡೊಯ್ಯುತ್ತೇವೆ ಎಂದಿದ್ದಾರೆ.