ನವದೆಹಲಿ: ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ಡಿಸೆಂಬರ್ 4ರಿಂದ 6ರವರೆಗೆ ನಡೆಯಲಿದೆ. ಕೊನೆಯ ದಿನವಾದ ಡಿಸೆಂಬರ್ 4ರಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಭೆಯ ನಿರ್ಣಯವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.
ಈ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನೀರಿಕ್ಷೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿದಿದೆ. ಹೀಗಾಗಿ ಈ ಬಾರಿಯೂ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಆರ್ಬಿಐ ರೆಪೊ ದರ ಕಡಿತಗೊಳಿಸಲಿದ್ದು, ಗೃಹ, ವಾಹನ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆ ಹೆಚ್ಚಿತ್ತು. ಆದರೆ, ಅಕ್ಟೋಬರ್ ನಲ್ಲಿ ಶೇಕಡ 6.21 ರಷ್ಟು ಹಣದುಬ್ಬರ ದಾಖಲಾಗಿದ್ದು, ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದೆ. 2023ರ ಫೆಬ್ರವರಿಯಿಂದಲೂ ಶೇಕಡ 6.5 ರಷ್ಟು ಇರುವ ರೆಪೊ ದರದಲ್ಲಿ ಈ ಬಾರಿಯೂ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.