ಮುಂಬೈ: ದೇಶದ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಮಾರ್ಚ್ ಅಂತ್ಯದವರೆಗೆ ವಾರಸುದಾರರು ಇಲ್ಲದ ಠೇವಣಿ ಶೇಕಡ 26ರಷ್ಟು ಏರಿಕೆಯಾಗಿ 78,213 ಕೋಟಿಗೆ ತಲುಪಿದೆ ಎಂದು ಆರ್.ಬಿ.ಐ. ತಿಳಿಸಿದೆ.
2023ರ ಮಾರ್ಚ್ ಅಂತ್ಯಕ್ಕೆ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯಲ್ಲಿನ ಮೊತ್ತ 62,225 ಕೋಟಿ ರೂಪಾಯಿ ಇತ್ತು. ಸಹಕಾರ ಬ್ಯಾಂಕುಗಳು ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿ ಇರುವ ಈ ಖಾತೆಗಳಲ್ಲಿ 10 ವರ್ಷಗಳಿಂದ ಯಾವುದೇ ವಹಿವಾಟು ನಡೆದಿಲ್ಲವೆಂದು ಹೇಳಲಾಗಿದೆ.
ವಾರಸುದಾರರ ಇಲ್ಲದ ಠೇವಣಿಗಳ ಪ್ರಮಾಣವನ್ನು ಕಡಿಮೆ ಮಾಡಲು ಅರ್ಹ ಹಕ್ಕುದಾರರಿಗೆ ಠೇವಣಿಯನ್ನು ಮರಳಿಸಲು ಆರ್‌ಬಿಐ ಅನೇಕ ಕ್ರಮ ಕೈಗೊಂಡಿದೆ. ಈ ಕುರಿತಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಒಳಗೊಂಡಂತೆ ವಾಣಿಜ್ಯ ಬ್ಯಾಂಕುಗಳು ಹಾಗೂ ಎಲ್ಲಾ ಸಹಕಾರ ಬ್ಯಾಂಕುಗಳಿಗೆ ಇದು ಅನ್ವಯವಾಗಲಿದ್ದು, ವಹಿವಾಟು ನಡೆಸದ ಖಾತೆಗಳು ಮತ್ತು ವಾರಸುದಾರರು ಇಲ್ಲದ ನಿಶ್ಚಿತ ಠೇವಣಿಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಬೇಕು ಎಂದು ಸೂಚನೆ ನೀಡಲಾಗಿದೆ.
ನಿಷ್ಕ್ರಿಯ ಖಾತೆಗಳ ಬಗ್ಗೆ ಪರಿಶೀಲಿಸಿ ಇವುಗಳ ಮೂಲಕ ವಂಚನೆ ನಡೆಯದಂತೆ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಠೇವಣಿ ಬಗ್ಗೆ ಹಕ್ಕುದಾರರು ಸಲ್ಲಿಸುವ ದೂರುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು. ಇಂತಹ ಖಾತೆಗಳ ಮರು ಸಕ್ರಿಯಗೊಳಿಸುವಿಕೆ, ಕ್ಲೈಮ್ ಗಳ ಇತ್ಯರ್ಥ, ಹಕ್ಕುದಾರರು ಅಥವಾ ಉತ್ತರಾಧಿಕಾರಿಗಳು ಅರ್ಹ ಖಾತೆದಾರರನ್ನು ಪತ್ತೆಹಚ್ಚಲು ಕ್ರಮವಹಿಸಬೇಕೆಂದು ಹೇಳಲಾಗಿದೆ.
ಬ್ಯಾಂಕುಗಳಲ್ಲಿ ಅನೇಕ ವರ್ಷಗಳಿಂದ ಉಳಿದುಕೊಂಡ ಠೇವಣಿಗಳನ್ನು ಹುಡುಕಿ ಹಿಂಪಡೆದುಕೊಳ್ಳಲು ನೆರವು ನೀಡುವ ಕೇಂದ್ರೀಕೃತ ಪೋರ್ಟಲ್ ವ್ಯವಸ್ಥೆಯನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ.