ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಗಳಿಗೆ ಮಹತ್ವದ ಸೂಚನೆ ನೀಡಿದೆ. ನೋಟು ನಿಷೇಧದ ಸಮಯದ ಸಿಸಿ ಟಿವಿ ರೆಕಾರ್ಡ್ ಗಳನ್ನು ಸುರಕ್ಷಿತವಾಗಿಡಿ ಎಂದು ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ನವೆಂಬರ್ 8,2016 ರಿಂದ ಡಿಸೆಂಬರ್ 30,2016 ರವರೆಗಿನ ಸಿಸಿ ಟಿವಿ ರೆಕಾರ್ಡನ್ನು ಸುರಕ್ಷಿತವಾಗಿಡುವಂತೆ ಬ್ಯಾಂಕ್ ಗಳಿಗೆ ಆರ್ಬಿಐ ಸೂಚನೆ ನೀಡಿದೆ.
ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಇದ್ರಿಂದ ಸಹಾಯವಾಗಲಿದೆ. ಸರ್ಕಾರ ಕಪ್ಪು ಹಣ ನಿಯಂತ್ರಣಕ್ಕೆ 2016ರಲ್ಲಿ ನೋಟುಗಳ ಮೇಲೆ ನಿಷೇಧ ಹೇರಿತ್ತು. 500, 1000 ರೂಪಾಯಿ ನೋಟುಗಳನ್ನು ನಿಷೇಧಿಸಿತ್ತು. ಸ್ಥಗಿತಗೊಂಡ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಠೇವಣಿ ಇಡುವುದು ಹಾಗೂ ವಿನಿಮಯ ಮಾಡಲು ಅವಕಾಶ ನೀಡಲಾಗಿತ್ತು.
ಹಳೆ ನೋಟುಗಳನ್ನು ಹಿಂಪಡೆದ ನಂತ್ರ ಹೊಸ ನೋಟುಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. 500 ರೂಪಾಯಿ ಹಾಗೂ 2 ಸಾವಿರ ರೂಪಾಯಿ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು. ನೋಟು ನಿಷೇಧದ ಸಂದರ್ಭದಲ್ಲಿ ಹಳೆ ನೋಟುಗಳನ್ನು ವಿನಿಮಯ ಮಾಡಲು ಬ್ಯಾಂಕ್ ಗಳ ಮುಂದೆ ಜನರು ದಟ್ಟಣೆಯಿತ್ತು. ಕಾನೂನು ಬಾಹಿರವಾಗಿ ನೋಟು ಸಂಗ್ರಹ ಮಾಡಿದವರ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಸಿಸಿ ಟಿವಿ ದೃಶ್ಯಾವಳಿಯನ್ನು ನಾಶ ಮಾಡದಂತೆ ಸೂಚನೆ ನೀಡಲಾಗಿದೆ.