ಬಾಗಲಕೋಟೆ: ಜನಸಂಖ್ಯೆಗೆ ಅನುಗುಣವಾಗಿ ಮದ್ಯ ಅಂಗಡಿ ತೆರೆಯಲಾಗುವುದು. ರಾಜ್ಯದಲ್ಲಿ 20 ವರ್ಷಗಳಿಂದ ಜನಸಂಖ್ಯೆ ಹೆಚ್ಚಾಗಿದ್ದರೂ ಮದ್ಯದ ಅಂಗಡಿಗಳ ಸಂಖ್ಯೆ ಕಡಿಮೆ ಇದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಮರ್ಪಕವಾಗಿ ಮದ್ಯ ಸಿಗದ ಕಾರಣ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಬೆಲೆಗೆ ಮಾಧ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಟೀಕಿಸುವವರು ಗ್ರಾಹಕರ ತೊಂದರೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ರಾಜ್ಯವನ್ನು ಕುಡುಕರ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಬಿ. ತಿಮ್ಮಾಪುರ, ಹಳ್ಳಿಗಳಲ್ಲಿ ಮದ್ಯದ ಅಂಗಡಿ ತೆರೆದ ಕೂಡಲೇ ಎಲ್ಲರೂ ಕುಡುಕರಾಗುತ್ತಾರೆಯೇ? ಸರ್ಕಾರ ಆದಾಯ ಹೆಚ್ಚಿಸಲು ಇದನ್ನು ಮಾಡುತ್ತಿಲ್ಲ. ಹಳ್ಳಿಗಳಲ್ಲಿ ಏನು ನಡೆಯುತ್ತಿದೆ. ಅದನ್ನು ನಿಲ್ಲಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ಕೊಡಲಿ ಎಂದು ತಿಳಿಸಿದ್ದಾರೆ.