ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಪ್ರಕರಣದಲ್ಲಿ ಕರಾವಳಿ ರಾಜಕೀಯ ಮಂಡ್ಯಕ್ಕೆ ತರಲು ಸಂಚು ಮಾಡಿದ್ದಾರೆ. ತರಬೇತಿ ಪಡೆದ ಆರ್‌ಎಸ್‌ಎಸ್, ಬಜರಂಗದಳದವರು ಗಲಭೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಗಲಾಟೆ ಮಾಡಬೇಕೆಂದೇ ಜೆಡಿಎಸ್ ಮತ್ತು ಬಿಜೆಪಿ ರಾಜಕೀಯ ಮಾಡುತ್ತಿವೆ. ಗ್ರಾಮ ಪಂಚಾಯಿತಿ ಅನುಮೋದನೆ ಪಡೆದು ಧ್ವಜ ಹಾರಿಸಲು ಆಗಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿ ಕೇಸರಿ ಧ್ವಜ ಹಾರಿಸಲಾಗಿದೆ. ಜೆಡಿಎಸ್ ನವರಿಗೆ ಭಗವಾಧ್ವಜ ಹಾರಿಸುವುದಕ್ಕೆ ಬರುವುದಿಲ್ಲ. 40 ವರ್ಷಗಳಿಂದ ಭಗವಾದ್ವಜ ಇತ್ತು ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ.
ಕ್ರಿಕೆಟ್ ಬುಕ್ಕಿ ಇದ್ದಾನೆ. ಅವನು ಗ್ರಾಮ ಪಂಚಾಯಿತಿ ಸದಸ್ಯ. ಆತನೇ ಇದಕ್ಕೆಲ್ಲ ಕಾರಣ. ಮಂಡ್ಯದಲ್ಲಿ ನಾವು ಒಂದು ಲಕ್ಷ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಅದು ಯಾರು ಬಂದು ತಡೆಯುತ್ತಾರೋ ನೋಡೋಣ ಎಂದು
ಕೆರಗೋಡು ಗ್ರಾಮದಲ್ಲಿ ಗಲಭೆ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಜೆಡಿಎಸ್ ಮತ್ತು ಆರ್.ಎಸ್.ಎಸ್.ನ ಕ್ರಿಮಿನಲ್ ಗಳಿಂದ ಗಲಭೆ ನಡೆದಿದೆ ಎಂದು ದೂರಿದ್ದಾರೆ.
ಹೊರಗಿನಿಂದ ಗಲಭೆಕೋರರನ್ನು ಕರೆಸಿ ಗಲಾಟೆ ಮಾಡಲಾಗಿದೆ. ನಮ್ಮ ಕೆರಗೋಡು ಜನರಿಗೆ ಆ ರೀತಿ ಘೋಷಣೆ ಕೂಗುವುದಕ್ಕೂ ಬರುವುದಿಲ್ಲ. ಹೊರಗಿನವರನ್ನು ಕರೆತಂದು ಗಲಾಟೆ ಮಾಡಿ ಕಲ್ಲು ಹೊಡೆಸಿದ್ದಾರೆ. ನಮ್ಮ ಫ್ಲೆಕ್ಸ್ ಕಿತ್ತು ಹಾಕಿಸಿ ಗಲಾಟೆ ಮಾಡಿಸಿದ್ದಾರೆ. ತ್ರಿವರ್ಣ ಧ್ವಜ ಹಾರಿಸಿದಕ್ಕೆ ಪ್ರತಿಭಟನೆ ನಡೆಸುತ್ತಾರೆ ಅಂದ್ರೆ ಏನು ಅರ್ಥ? ಜೆಡಿಎಸ್, ಬಿಜೆಪಿ ಮುಖಂಡರು, ಸ್ಥಳೀಯ ಪುಢಾರಿಗಳು ಗಲಭೆ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
ಕೆರಗೋಡು ಘಟನೆಯಲ್ಲಿ ಸ್ಥಳೀಯ ಪಿಡಿಒ ತಪ್ಪು ಕೂಡ ಇದೆ. ಅವರನ್ನು ಅಮಾನತು ಮಾಡುವಂತೆ ಹೇಳಿದ್ದೇನೆ. ಹನುಮ ಧ್ವಜ ಹಾರಿಸಲು ಅನುಮತಿ ಕೊಡಲು ಪಿಡಿಒಗೆ ಅಧಿಕಾರ ಇಲ್ಲ. ಆ ಪಿಡಿಒ ಹೆದರಿಸಿ ಹನುಮಧ್ವಜಕ್ಕೆ ಅನುಮತಿ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.