
ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಯಾಂಡಲ್ ವುಡ್ ತಾರೆಯರೇ ಭಾಗವಹಿಸದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರದ ಸಚಿವರು, ಶಾಸಕರು ಈ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಸಿಸಿಎಲ್ ಕ್ರಿಕೆಟ್ ಆಡಲು ಹೋಗ್ತೀರಾ, ಸಬ್ಸಿಡಿ ಕೇಳ್ತೀರಾ, ನಿಮ್ಮದೇ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲ್ವಾ? ಎಂದು ಶಾಸಕ ರವಿ ಗಣಿಗ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರವಿ ಗಣಿಗ, ಇವರಿಗೆ ಸಿಸಿಎಲ್ ಕ್ರಿಕೆಟ್ ಆಡಲು ಹೋಗಲು ಆಗುತ್ತೆ, ಇಲ್ಲಿನ ಚಲನಚಿತ್ರೋತ್ಸವದಲ್ಲಿ ಪಲಗೊಳ್ಳಲು ಆಗಲ್ಲ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇದೆ. ಸದ್ಯಕ್ಕೆ ಸಿಸಿ ಎಲ್ ಕ್ರಿಕೆಟ್ ನಿಲ್ಲಿಸಿ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷರು ಹೇಳಬಹುದಿತ್ತಲ್ಲವೇ? ಫಿಲ್ಮ್ ಚೇಂಬರ್ ಅಧ್ಯಕ್ಷ ಆಂಧ್ರ ಮೂಲದವರು. ಅವರು ಇಲ್ಲಿ ಬಂದು ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡು ಬೆಳೆದು ಈಗ ಕನ್ನಡದವರಿಗೆ ಹೇಳುವಂತಾಗಿದೆ. ಚಿತ್ರೋತ್ಸವದಲ್ಲಿ, ಮೇಕೆದಾಟು ಹೋರಾಟದಲ್ಲಿ ಚಿತ್ರರಂಗದವರು ಭಾಗವಹಿಸಿಲ್ಲ ಎಂದಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತು ಸರಿಯಲ್ಲ ಎಂದಿದ್ದಾರೆ. ಇಂತವರಿಗೆ ಬುದ್ಧಿಕಲಿಸಬೇಕಾ ಬೇಡವಾ? ಎಂದು ಪ್ರಶ್ನಿಸಿದರು.
ಇದು ಅವರಿಗೆ ನಾನು ಮಾಡುವ ಲಾಸ್ಟ್ ವಾರ್ನಿಂಗ್. ಸಿನಿಮಾದವರಿಗೆ ಸಬ್ಸಿಡಿ ನಿಲ್ಲಿಸಿ ಎಂದು ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ. ಖುದ್ದು ಭೇಟಿಯಾಗಿ ಹೇಳುತ್ತೇನೆ ಎಂದಿದ್ದಾರೆ.
ಇನ್ನು ಕೊಡಗಿನ ಬೆಡಗಿ, ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ಅವರಿಗೆ ಕಳೆದ ಬಾರಿ ಶಾಸಕರೊಬ್ಬರು ಹೋಗಿ ಚಿತ್ರೋತ್ಸವಕ್ಕೆ ಆಹ್ವಾನ ನೀಡಿದರೆ ನಾನು ಹೈದರಾಬಾದ್ ನಲ್ಲಿ ಇದ್ದೇನೆ. ನನಗೆ ಬರಲು ಟೈಂ ಇಲ್ಲ ಎಂದಿದ್ದಾರೆ. ಕನ್ನಡದವರೇ ಆಗಿ ಕನ್ನಡ ಸಿನಿಮಾ ಕಾರ್ಯಕ್ರಮಕ್ಕೆ ಈ ರೀತಿ ಹೇಳಿದರೆ ಇಂತವರಿಗೆ ಬುದ್ಧಿಕಲಿಸುವುದು ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.