ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಚರ್ಚೆ ಜೋರಾಗಿದ್ದು, ಅದರಲ್ಲೂ ಬಿಜೆಪಿ ವರಿಷ್ಠ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಇಮ್ಮಡಿಗೊಳಿಸಿದೆ.
ಇತ್ತೀಚೆಗೆ ರವಿ ಡಿ. ಚನ್ನಣ್ಣನವರ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದು ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಎಲ್ಲಾ ವಿಚಾರಗಳ ಬಗ್ಗೆ ಇದೀಗ ಸ್ವತಃ ಚೆನ್ನಣ್ಣನವರ್ ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜಕೀಯ ಸೇರುತ್ತೇನೆ ಎಂಬುದು ಸತ್ಯಕ್ಕೆ ದೂರವಾದದ್ದು. ನಾನು ಭರವಸೆ ಎಂಬ ಪುಸ್ತಕವನ್ನು ಬರೆಯುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಜಾದಿನದ ಸಮಯದಲ್ಲಿ ಹಳೆಯ ಸ್ನೇಹಿತರು, ದೇವಸ್ಥಾನಗಳು, ಶ್ರೀಮಠಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದೇನೆ ಅಷ್ಟೇ. ಆದರೆ ಕೆಲ ಮಾಧ್ಯಮಗಳು ನಾನು ರಾಜಕೀಯ ಸೇರುತ್ತಿದ್ದೇನೆ ಎಂದು ಅಪಾರ್ಥ ಕಲ್ಪಿಸಿ ಸುದ್ದಿಮಾಡುತ್ತಿವೆ. ನಾನು ರಾಜಕೀಯ ಸೇರುವ ವಿಚಾರ ಸತ್ಯಕ್ಕೆ ದೂರವಾದದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.