
ಕಳೆದ 22ರಂದು ಬಾಲಿವುಡ್ ನಟಿ ರವೀನಾ ಟಂಡನ್ ಅವರು ಸಾತ್ಪುರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದ ಹುಲಿ ಫೋಟೋ ಕುರಿತು ಭಾರಿ ವೈರಲ್ ಆಗಿತ್ತು. ಇವರು ಯಾವುದೇ ರಕ್ಷಣೆ ಇಲ್ಲದೇ ಅಲ್ಲಿಗೆ ಹೋಗಿರುವುದಾಗಿ ಕೆಲವರು ಹೇಳುತ್ತಿದ್ದರು. ಈ ಕುರಿತು ತನಿಖೆ ಕೂಡ ಶುರುವಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ರವೀನಾ, ತಾವು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದುದಾಗಿ ಹೇಳಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅದು ಗೊತ್ತುಪಡಿಸಿದ ಪ್ರವಾಸೋದ್ಯಮ ಮಾರ್ಗವಾಗಿತ್ತು. ಇಲಾಖೆಯಿಂದ ಒದಗಿಸಲಾದ ತರಬೇತಿ ಪಡೆದ ಮಾರ್ಗದರ್ಶಿಗಳು ಮತ್ತು ಚಾಲಕರು ಸಫಾರಿಯಲ್ಲಿ ಜೊತೆಗಿದ್ದರು ಎಂದು ತಿಳಿಸಿದ್ದಾರೆ.
ಹುಲಿಗಳು ಯಾವಾಗ ಮತ್ತು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಇದು ಅರಣ್ಯ ಇಲಾಖೆಯ ಪರವಾನಗಿ ಪಡೆದ ವಾಹನವಾಗಿದೆ, ಅವರ ಮಾರ್ಗದರ್ಶಕರು ಮತ್ತು ಚಾಲಕರು ತಮ್ಮ ಗಡಿಗಳು ಮತ್ತು ಕಾನೂನುಗಳನ್ನು ತಿಳಿದುಕೊಳ್ಳಲು ತರಬೇತಿ ಪಡೆದಿದ್ದಾರೆ ಎಂದು ನಟಿ ಹೇಳಿದ್ದಾರೆ.