ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಶವವೊಂದರ ಕಣ್ಣು ನಾಪತ್ತೆಯಾಗಿದ್ದು, ಇದಕ್ಕೆ ಇಲಿಗಳು ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಆದರೆ, ಶವದ ಕಣ್ಣಿಗೆ ಇಲಿಗಳು ಕಚ್ಚಿರುವುದು ಖಚಿತವಾಗಿದೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ. ಶವಾಗಾರದಲ್ಲಿ ಇರಿಸಲಾಗಿದ್ದ ಮೃತದೇಹದ ಕಣ್ಣನ್ನು ಇಲಿ ಕಚ್ಚಿದ ಅದೇ ಆಸ್ಪತ್ರೆಯಲ್ಲಿ ಇದೇ ರೀತಿಯ ಪ್ರಕರಣ ಮುನ್ನೆಲೆಗೆ ಬಂದ ಕೆಲವೇ ದಿನಗಳಲ್ಲಿ ಇದು ನಡೆದಿದೆ.
ಈ ವಿಚಾರವನ್ನು ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ಕಣ್ಣು ಕಾಣೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿದ್ದಾರೆ. ಇಲ್ಲಿಯವರೆಗೆ, ಕಣ್ಣು ಹೇಗೆ ಕಾಣೆಯಾಗಿದೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ. ಈ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಯ ಆಡಳಿತವು ಸದ್ಯ ಶವಾಗಾರದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ.
ಪ್ರಾಥಮಿಕ ದೃಷ್ಟಿಯಲ್ಲಿ ಇಲಿ ಕಣ್ಣನ್ನು ಅಗಿದಿರುವ ಸಾಧ್ಯತೆ ಇದೆ. ಆದರೆ ತನಿಖೆ ಪೂರ್ಣಗೊಂಡ ನಂತರವೇ ಅದನ್ನು ದೃಢಪಡಿಸಬಹುದು ಎಂದು ನಿವಾಸಿ ವೈದ್ಯಾಧಿಕಾರಿ ಡಾ.ಅಭಿಷೇಕ್ ಠಾಕೂರ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಇಲಿಗಳ ಹಾವಳಿಯಿಂದ ರೋಗಿಗಳು ಹೈರಾಣಾಗಿದ್ದಾರೆ. ಅನೇಕರು ಆಸ್ಪತ್ರೆ ಆಡಳಿತ ಮಂಡಳಿ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.