ನವದೆಹಲಿ: ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಪಡಿತರ ಕಡಿತ ಮಾಡಿ 47,229 ಕೋಟಿ ರೂಪಾಯಿ ಉಳಿಸುವಂತೆ ನೀತಿ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಾಷ್ಟ್ರೀಯ ಆಹಾರ ಭದ್ರತೆಯ ಕಾಯ್ದೆ ಅನ್ವಯ ನಗರ ಮತ್ತು ಗ್ರಾಮೀಣ ಪ್ರದೇಶದ ಪಡಿತರ ವ್ಯಾಪ್ತಿಯನ್ನು ಕಡಿತಗೊಳಿಸಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಉಳಿಸಬಹುದಾಗಿದೆ ಎಂದು ಹೇಳಲಾಗಿದೆ.
ಪಡಿತರ ವ್ಯಾಪ್ತಿ ಕಡಿತಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 47,229 ಕೋಟಿ ರೂ.ನಷ್ಟು ಸಬ್ಸಿಡಿ ಉಳಿತಾಯವಾಗುತ್ತದೆ. ನಗರ ಪ್ರದೇಶದಲ್ಲಿ ಪಡಿತರ ವ್ಯಾಪ್ತಿಯನ್ನು ಶೇಕಡ 50 ರಿಂದ 40 ರಷ್ಟು ಇಳಿಸಬಹುದು. ಅದೇ ರೀತಿ ಗ್ರಾಮೀಣ ಭಾಗದಲ್ಲಿ ಶೇಕಡ 75 ರಷ್ಟು ಜನಸಂಖ್ಯೆಗೆ ನೀಡುವ ಪಡಿತರ ವ್ಯಾಪ್ತಿಯನ್ನು ಶೇಕಡ 60ರಷ್ಟು ಇಳಿಕೆ ಮಾಡಬಹುದು. ಇದರಿಂದ ಸಬ್ಸಿಡಿ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.
ಆಹಾರ ಭದ್ರತಾ ಕಾಯ್ದೆಯಡಿ ದೇಶದ 67 ರಷ್ಟು ಜನರಿಗೆ ಪಡಿತರ ನೀಡಲಾಗುತ್ತಿದೆ. ಅಂತ್ಯೋದಯ ಅನ್ನ ಯೋಜನೆಯಡಿ ಬಡ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ ನೀಡಲಾಗುತ್ತಿದೆ. ನೀತಿ ಆಯೋಗದ ಈ ಸಲಹೆಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿ ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿದೆ ಎಂದು ಹೇಳಲಾಗಿದೆ.