ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಬಳಸುತ್ತಿದ್ದ ಒಟಿಪಿ ಸೌಲಭ್ಯ ಸಂಪೂರ್ಣ ಸ್ಥಗಿತವಾಗಲಿದೆ.
ಕಾಳ ಸಂತೆಯಲ್ಲಿ ಆಹಾರ ಪದಾರ್ಥಗಳ ಮಾರಾಟ ತಡೆಗೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದ್ದು, ಪಡಿತರ ವಿತರಣೆ ಕೇಂದ್ರಗಳಲ್ಲಿ ಒಟಿಪಿ ಸೌಲಭ್ಯ ಬಳಸಿಕೊಂಡು ಇನ್ನು ಮುಂದೆ ಪಡಿತರ ಪಡೆಯಲು ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ.
ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ನೀಡಿ ಪಡಿತರ ಚೀಟಿದಾರರು ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳಿಗೆ ಹಾಜರಾಗಲು ಸಾಧ್ಯವಾಗದಿರುವವರು ಆಧಾರ್ ಜೋಡಣೆಯಾದ ತಮ್ಮ ಮೊಬೈಲ್ ನಂಬರ್ ಗೆ ಬರುವ ಒಟಿಪಿ ನೀಡಿ ಪಡಿತರ ಪಡೆದುಕೊಳ್ಳಬಹುದಾಗಿದೆ.
ಈ ಸೌಲಭ್ಯ ಬಳಸಿಕೊಂಡು ಗ್ರಾಹಕರ ಹೆಸರಲ್ಲಿ ಮಧ್ಯವರ್ತಿಗಳು ಪಡಿತರ ಸಂಗ್ರಹಿಸುತ್ತಿದ್ದಾರೆ. ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಆಹಾರ ಇಲಾಖೆ ಸುಧಾರಣಾ ಕ್ರಮ ಕೈಗೊಂಡಿದ್ದು, ಒಟಿಪಿ ಸೌಲಭ್ಯಕ್ಕೆ ಕಡಿವಾಣ ಹಾಕಲಾಗಿದೆ. ಆದರೆ ಒಟಿಪಿ ಸೌಲಭ್ಯ ಸ್ಥಗಿತಗೊಳಿಸುವುದರಿಂದ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮತ್ತು ಕೂಲಿ ಕಾರ್ಮಿಕರು, ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಒಟಿಪಿ ವ್ಯವಸ್ಥೆ ಮುಂದುವರಿಸಬೇಕೆಂದು ಒತ್ತಾಯ ಕೇಳಿ ಬಂದಿದೆ.