ಬೆಂಗಳೂರು: ಪ್ರತಿ ತಿಂಗಳ ಅಂತ್ಯದೊಳಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಆಹಾರ ನಿಗಮದಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಪ್ರತಿ ಮಾಸಾಂತ್ಯದೊಳಗೆ ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಇಲಾಖೆಯಲ್ಲಿರುವ ಲೋಪದೋಷ ಸರಿಪಡಿಸಬೇಕು. ಹೊಸ ಪಡಿತರ ಚೀಟಿ ಕೋರಿ ಐದು ವರ್ಷಗಳಿಂದ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಬಿಪಿಎಲ್, ಎಪಿಎಲ್ ಕಾರ್ಡ್ ಗಳನ್ನು ಗುರುತಿಸಿ ವಿಲೇವಾರಿ ಮಾಡಬೇಕು. ಇಲಾಖೆಯಲ್ಲಿ ಪಡಿತರ ಚೀಟಿದಾರರಿಗೆ ಸರಬರಾಜು ಮಾಡುತ್ತಿರುವ ಅಕ್ಕಿ, ರಾಗಿ, ಜೋಳ ಮೊದಲಾದ ಧಾನ್ಯಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.