ಬೆಂಗಳೂರು: ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿರುವ 5 ಕೆಜಿ ಪಡಿತರ ಧಾನ್ಯಕ್ಕೆ ರಶೀದಿ ನೀಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಇದಕ್ಕೆ ಪಡಿತರ ವಿತರಕರ ಸಂಘದಿಂದ ವಿರೋಧ ವ್ಯಕ್ತವಾಗಿದೆ.
ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದ್ದು, ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ತಿಂಗಳು ಪಡಿತರ ಫಲಾನುಭವಿಗಳಿಗೆ ವಿತರಿಸುವ ಆಹಾರ ಧಾನ್ಯಕ್ಕೆ ಮುದ್ರಿತ ರಶೀದಿ ನೀಡುವಂತೆ ತಿಳಿಸಿದೆ. ಇದಕ್ಕಾಗಿ ಆಹಾರ ದತ್ತಾಂಶ ಮೂಲಕ ಅಗತ್ಯ ರಶೀದಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ ಸೂಚನೆ ನೀಡಿದೆ.
ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಆಹಾರಧಾನ್ಯಕ್ಕೆ ರಸೀದಿ ನೀಡಲು ಪ್ರಿಂಟರ್ ಖರೀದಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಆಹಾರ ಇಲಾಖೆ ತಿಳಿಸಿದೆ. ರಸೀದಿಯಲ್ಲಿ ಯೋಜನೆಯ ಹೆಸರು, ಜಿಲ್ಲೆ, ತಾಲೂಕು, ಫಲಾನುಭವಿಯ ಹೆಸರು, ಒಟ್ಟು ಸದಸ್ಯರ ಸಂಖ್ಯೆ, ಹಂಚಿಕೆ ದಿನಾಂಕ, ಆಹಾರಧಾನ್ಯದ ವಿವರ, ಇದಕ್ಕೆ ತಗಲುವ ವೆಚ್ಚ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಎಷ್ಟು, ಪಾವತಿಸಬೇಕಾದ ಮೊತ್ತ ಸೇರಿದಂತೆ ಹಲವು ಮಾಹಿತಿಗಳನ್ನು ಒಳಗೊಂಡಿರುತ್ತದೆ.
ಪಡಿತರ ವಿತರಕರ ಸಂಘ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ರಶೀದಿ ಕೊಡಲು ಪ್ರಿಂಟರ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಖರೀದಿಸಲು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಹೊರೆಯಾಗುತ್ತದೆ. ಸರ್ಕಾರವೇ ಎಲ್ಲಾ ವ್ಯವಸ್ಥೆ ಮಾಡಿ ಕೊಡಬೇಕು. ಇಲ್ಲದಿದ್ದರೆ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಲಾಗಿದೆ.