ಬಳ್ಳಾರಿ: ಕೋವಿಡ್ ಹಿನ್ನೆಲೆಯಲ್ಲಿ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳು ಮುದ್ರೆ(ಬಯೋಮೆಟ್ರಿಕ್) ನೀಡಿ ಪಡೆಯಬೇಕಾಗಿರುವುದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ರ ಎರಡನೆಯ ಅಲೆಯ ಸಾಂಕ್ರಾಮಿಕ ವ್ಯಾಪಿಸುತ್ತಿರುವ ಕಾರಣ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ 2021 ಮೇ ತಿಂಗಳ ಪಡಿತರವನ್ನು ಪಡಿತರ ಚೀಟಿದಾರರ ಬೆರಳು ಮುದ್ರೆ(ಬಯೋಮೆಟ್ರಿಕ್) ಪಡೆಯದೆ ವಿತರಿಸಲು ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತಿಳಿಸಲಾಗಿದೆ. ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ವಿತರಿಸಲು ಪಡಿತರ ಚೀಟಿದಾರರು ಬೆರಳು ಮುದ್ರೆ (ಬಯೋಮೆಟ್ರಿಕ್) ನೀಡುವಂತೆ ಒತ್ತಾಯಿಸಬಾರದೆಂದು ಅವರು ತಿಳಿಸಿದ್ದಾರೆ,
ಪಡಿತರ ಚೀಟಿದಾರರು ಆಧಾರ್ ಜೊತೆ ಜೋಡಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ನೀಡಿ ವಿತರಿಸಲಾಗುವುದು. ವಯೋವೃದ್ಧರು, ಅನಾರೋಗ್ಯ ಪೀಡಿತರು ಮತ್ತು ವಿಶೇಷಚೇತನರಿಗೆ ವಿನಾಯತಿ ಸೌಲಭ್ಯದಡಿ ಪಡಿತರ ವಿತರಿಸಲಾಗುವುದು. ಪಡಿತರ ಚೀಟಿದಾರರ ಪರಿಶೀಲನಾ ಪಟ್ಟಿ/ ಕೈಬಿಲ್ಲು ಮೂಲಕವೂ ಪಡಿತರವನ್ನು ಪಡಿತರ ಚೀಟಿದಾರರಿಗೆ ನೇರವಾಗಿ ವಿತರಣೆ ಮಾಡಲಾಗುವುದು.
ಪಡಿತರ ಪಡೆಯಲು ರಾಜ್ಯ ಮತ್ತು ಹೊರರಾಜ್ಯದ ಪಡಿತರ ಚೀಟಿದಾರರಿಗೆ ಪೋರ್ಟಬಲಿಟಿ ಸೌಲಭ್ಯದ ಮೂಲಕ ಪಡಿತರ ವಿತರಣೆ ಸಹ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19ರ ಎರಡನೆಯ ಅಲೆ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2021ನೇ ಮೇ ತಿಂಗಳ ಪಡಿತರವನ್ನು ಪರಿಶೀಲನಾ ಪಟ್ಟಿ (ಚೆಕ್ ಲಿಸ್ಟ್) ಅಥವಾ ಯಾವುದಾದರೂ ಮೊಬೈಲ್ ಗೆ ಓ.ಟಿ.ಪಿ ನೀಡುವುದರ ಮೂಲಕ ವಿತರಿಸಲು ಅವಕಾಶ ನೀಡಬೇಕೆಂದು ರಾಜ್ಯ ಪಡಿತರ ವಿತರಕರ ಸಂಘವು ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿ ಪಡಿತರ ವಿತರಣೆಗೆ ಪರಿಶೀಲನಾ ಪಟ್ಟಿ (ಚೆಕ್ ಲಿಸ್ಟ್) ಸೌಲಭ್ಯ ಸೇರಿದಂತೆ ಪಡಿತರ ವಿತರಣೆಗೆ ಸುಲಭವಾಗಲು ಅನೇಕ ರೀತಿಯ ಅವಕಾಶಗಳನ್ನು ನ್ಯಾಯಬೆಲೆ ಅಂಗಡಿಗೆ ಕಲ್ಪಿಸಿಕೊಡಲಾಗಿದೆ.
ಯಾವುದಾದರೂ ಮೊಬೈಲ್ ಗೆ ಓ.ಟಿ.ಪಿ ಸೌಲಭ್ಯ ನೀಡುವುದರ ಮೂಲಕ ಪಡಿತರ ವಿತರಿಸುವ ವಿಷಯವಾಗಿ ಸ್ಪಷ್ಟಪಡಿಸುವುದೇನೆಂದರೆ, ಇಂತಹ ಸೌಲಭ್ಯವನ್ನು ಕೋವಿಡ್-19 ಒಂದನೇ ಅಲೆಯ ಸಂದರ್ಭದಲ್ಲಿ ಕಲ್ಪಿಸಲಾಗಿತ್ತು. ಆಗ ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು ಒಂದೇ ಮೊಬೈಲ್ ನಂಬರ್ ಬಳಸಿ ಅನೇಕ ಪಡಿತರ ಚೀಟಿಗಳಿಗೆ ಪಡಿತರ ವಿತರಣೆ ಮಾಡಿರುವ ಪ್ರಕರಣಗಳು ವರದಿಯಾಗಿವೆ; ಇದರಿಂದ ಪಡಿತರ ಚೀಟಿದಾರರಿಗೆ ಪಡಿತರ ದೊರಕದೆ ಪಡಿತರವನ್ನು ದುರುಪಯೋಗ ಮಾಡಲು ಅವಕಾಶವಿರುತ್ತದೆ ಎಂದು ಅವರು ವಿವರಿಸಿದ್ದಾರೆ.
ಕೇಂದ್ರ ಸರ್ಕಾರದ ನೀತಿಯಂತೆ ಪಡಿತರವನ್ನು ರಾಜ್ಯಗಳು ಬಯೋದೃಢೀಕರಣದ ಮೂಲಕ ವಿತರಿಸಿದರೆ ಮಾತ್ರ ಅಂತಹ ವಿತರಣೆಯ ಮಾಹಿತಿಯೂ ಕೇಂದ್ರ ಸರ್ಕಾರದ ದತ್ತಾಂಶ ಕೇಂದ್ರಕ್ಕೆ ರವಾನೆಯಾಗುತ್ತದೆ ಅದರ ಆಧಾರದ ಮೇಲೆ ಕೇಂದ್ರ ಸರ್ಕಾರವು ಪ್ರತಿ ತಿಂಗಳ ಆಹಾರಧಾನ್ಯ ಹಂಚಿಕೆಯನ್ನು ನೀಡುತ್ತದೆ. ಅದಾಗ್ಯೂ ರಾಜ್ಯದಲ್ಲಿ ಎದುರಾಗಿರುವ ಕೋವಿಡ್-19ರ ಎರಡನೇ ಅಲೆ ಸಾಂಕ್ರಾಮಿಕದ ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಹಾಗೂ ಅಧಿಕಾರಿಗಳ ಮೇಲೆ ಯಾವುದೇ ಆರೋಗ್ಯದ ದುಷ್ಪರಿಣಾಮಗಳು ಉಂಟಾಗುವುದನ್ನು ತಡೆಯಲು ಸರಳ ಮತ್ತು ಪಾರದರ್ಶಕ ಪಡಿತರ ವಿತರಣೆಗೆ ಅವಕಾಶಗಳನ್ನು ಮಾಡಲಾಗಿದೆ ಪಡಿತರ ವಿತರಣೆಯಲ್ಲಿ ಸರಳ ಮತ್ತು ಪಾರದರ್ಶಕ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ; ಆದರೂ ಕೆಲವರು ಗೊಂದಲಗಳನ್ನು ಸೃಷ್ಟಿ ಮಾಡುತ್ತಿರುವುದು ಆಧಾರರಹಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಕೋವಿಡ್-19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪಡಿತರ ಚೀಟಿದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೆ ನೀಡಿರುವ ಪಡಿತರದ ವಸ್ತುಗಳು ನಿಗದಿತ ಸಮಯದಲ್ಲಿ ನಿಗದಿತ ಪ್ರಮಾಣದಲ್ಲಿ ಮತ್ತು ಆರೋಗ್ಯಪೂರ್ಣ ವಾತಾವರಣದಲ್ಲಿ ಸರಳ ಮಾರ್ಗಗಳ ಮೂಲಕ ವಿತರಣೆ ಆಗುವಂತೆ ಸರ್ಕಾರವು ಕ್ರಮ ಕೈಗೊಂಡಿದೆ ಎಂದು ಅವರು ವಿವರಿಸಿದ್ದಾರೆ.
ಯಾವುದೇ ಪಡಿತರ ಚೀಟಿದಾರರಿಗೆ ಅನಾನುಕೂಲವಾದಲ್ಲಿ ಅವರು ತಮ್ಮ ದೂರುಗಳನ್ನು ಬೆಂಗಳೂರಿನ ಆಯುಕ್ತಾಲಯದ ನಿಯಂತ್ರಣ ಕೊಠಡಿ ಸಂಖ್ಯೆ 1967, 1800-425-9339 ಮತ್ತು 14445 ದಾಖಲಿಸಲು ಹಾಗೂ ಜಂಟಿ ನಿರ್ದೇಶಕರ ಕಾರ್ಯಾಲಯ ಬಳ್ಳಾರಿ ಕಛೇರಿ ಸಂಖ್ಯೆ: 08392-272557 ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಅಥವಾ ತಹಶೀಲ್ದಾರರವರಿಗೆ ದೂರು ಸಲ್ಲಿಸಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.